ADVERTISEMENT

ಕುನಾಲ್‌ ಕಾಮ್ರಾ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದ ಸಿಜೆಐ ಚಂದ್ರಚೂಡ್‌

ಟಿ.ವಿ ಆ್ಯಂಕರ್ ಅರ್ನಾಬ್‌ ಗೋಸ್ವಾಮಿಗೆ ಜಾಮೀನು ನೀಡಿದಕ್ಕೆ ಸುಪ್ರೀಂ ಕೋರ್ಟ್‌ ಅನ್ನು ಟೀಕೆ ಮಾಡಿದ್ದ ಕುನಾಲ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಜನವರಿ 2023, 13:24 IST
Last Updated 5 ಜನವರಿ 2023, 13:24 IST
ಕುನಾಲ್‌ ಕಾಮ್ರಾ
ಕುನಾಲ್‌ ಕಾಮ್ರಾ   

ನವದೆಹಲಿ: ಸ್ಟಾಂಡಪ್ ಕಮೇಡಿಯನ್‌ ಕುನಾಲ್ ಕಾಮ್ರಾ ಅವರಿಗೆ ಸಂಬಂಧಿಸಿದ ನ್ಯಾಯಾಂಗ ನಿಂದನೆ ಪ್ರಕರಣವೊಂದರ ವಿಚಾರಣೆಯಿಂದ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್‌ ಅವರು ಹಿಂದೆ ಸರಿದಿದ್ದಾರೆ.

ಆತ್ಮಹತ್ಯೆಗೆ ಪ್ರಚೋದನೆ ಆರೋಪದಲ್ಲಿ ಬಂಧಿತರಾಗಿದ್ದ ಟಿ.ವಿ ಆ್ಯಂಕರ್ ಅರ್ನಾಬ್‌ ಗೋಸ್ವಾಮಿ ಅವರಿಗೆ ಜಾಮೀನು ನೀಡಿದ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಕುನಾಲ್‌ ಕಾಮ್ರಾ ಅವರು ಟೀಕೆ ಮಾಡಿದ್ದರು. ಹೀಗಾಗಿ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಗಿತ್ತು.

‍ಪ್ರಕರಣವು ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್‌ ಹಾಗೂ ಇಂದಿರಾ ಬ್ಯಾನರ್ಜಿ ಅವರಿದ್ದ ನ್ಯಾಯಪೀಠದ ಮುಂದೆ ಬಂದಿತ್ತು. ಈಗ ಇದರ ವಿಚಾರಣೆಯಿಂದ ತಾವು ಹಿಂದೆ ಸರಿಯುತ್ತಿರುವುದಾಗಿ ಡಿ.ವೈ ಚಂದ್ರಚೂಡ್ ಹೇಳಿದ್ದಾರೆ.

ADVERTISEMENT

ಅರ್ನಬ್ ಗೋಸ್ವಾಮಿ ಅವರ ಕಠಿಣ ಟೀಕಾಕಾರರಾಗಿರುವ ಕುನಾಲ್‌ ಕಾಮ್ರಾ ಅವರು, ಸಾಮಾಜಿಕ ಜಾಲತಾಣಗಲ್ಲಿ ಅರ್ನಾಬ್‌ ಅವರನ್ನು ಆಗಾಗ್ಗೆ ಟೀಕೆ ಮಾಡುತ್ತಿರುತ್ತಾರೆ. ವಿಮಾನ ಪ್ರಯಾಣದ ವೇಳೆಯೂ ಅವರ ರೇಗಿಸಿ ಹಲವು ವಿಮಾನಯಾನ ಸಂಸ್ಥೆಗಳಿಂದ ನಿಷೇಧ ಕೂಡ ಅನುಭವಿಸಿದ್ದರು.

ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಗಿದ್ದರೂ, ಕ್ಷಮೆ ಕೇಳಲು ಅವರು ನಿರಾಕರಿಸಿದ್ದರು. ‘ತಮಾಷೆಗಳು ಯಾವುದೂ ನಿಜವಲ್ಲ, ಅದು ನಿಜ ಎಂದು ಭಾವಿಸಬೇಕಾಗಿಯೂ ಇಲ್ಲ‘ ಎಂದು ಅವರು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.