ತಿರುವನಂತಪುರ: ದಕ್ಷಿಣ ಕುವೈತ್‌ನ ಮಂಗಾಫ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಕೇರಳದ 13 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಕೊಟ್ಟಾಯಂನ ಚಂಗನಾಶ್ಶೇರಿಯ ಶ್ರೀಹರಿ ಪಿ (27), ಮಲಪ್ಪುರಂನ ಬಾಹುಲೇಯನ್ (36), ಕೊಲ್ಲಂನ ಶಮೀರ್ ಉಮರುದ್ದೀನ್ (30), ಕಾಸರಗೋಡಿನ ಚೆಂಗಳದ ಕೆ. ರೆಂಜಿತ್ (34), ಕಾಸರಗೋಡಿನ ಪಿಲಿಕೋಡು ನಿವಾಸಿ ಕೇಲು(58), ಕೊಟ್ಟಾಯಂನ ಸ್ಟೆಫಿನ್ ಅಬ್ರಹಾಂ ಸಾಬು(29), ಪತ್ತನಂತಿಟ್ಟದ ಪಂದಳಂನ ಆಕಾಶ್ ಶಶಿಧರನ್ (31), ಕೊಲ್ಲಂನ ಪುನಲೂರಿನ ನಿವಾಸಿ ಸಾಜನ್ ಜಾರ್ಜ್ (29), ಪತ್ತನಂತಿಟ್ಟದ ಕೊನ್ನಿಯ ಸಾಜು ವರ್ಗೀಸ್ (56) ಮತ್ತು ಪಿ.ವಿ.ಮುರಳೀಧರನ್ (68), ಪತ್ತನಂತಿಟ್ಟದ ಲೂಕೋಸ್ (48), ಕೊಲ್ಲಂನ ತಿರುವಲ್ಲಾದ ಥಾಮಸ್ ಉಮ್ಮನ್ (37), ಮಲಪ್ಪುರಂನ ನೂಹು ಮೃತಪಟ್ಟವರು ಎಂದು ತಿಳಿದುಬಂದಿದೆ.
ಹಲವು ಮೃತದೇಹಗಳನ್ನು ಇನ್ನೂ ಗುರುತಿಸಬೇಕಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಕೇರಳ ಸರ್ಕಾರದ ಅನಿವಾಸಿ ಕೇರಳಿಯರ(ಎನ್‌ಆರ್‌ಕೆಎಸ್) ಕಲ್ಯಾಣ ಸಂಸ್ಥೆ ತಿಳಿಸಿದೆ.
ಮುಂದಿನ ಕ್ರಮಗಳ ಕುರಿತು ಚರ್ಚಿಸಲು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿಶೇಷ ಸಂಪುಟ ಸಭೆಯನ್ನು ಕರೆದಿದ್ದಾರೆ ಎಂದು ತಿಳಿದುಬಂದಿದೆ.
ಅಗ್ನಿ ದುರಂತದ ಬಗ್ಗೆ ಕುವೈತ್ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆಯಲಾಗುತ್ತಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಕುವೈತ್‌ನ ದಕ್ಷಿಣದಲ್ಲಿರುವ ಅಹ್ಮದಿ ಆಡಳಿತ ಪ್ರಾಂತ್ಯದ ಮಂಗಾಫ್ ಪ್ರದೇಶದ ಆರು ಮಹಡಿಗಳ ಕಟ್ಟಡವೊಂದರ ಅಡುಗೆ ಮನೆಯಲ್ಲಿ ಬುಧವಾರ ಬೆಳಿಗ್ಗೆ ಹೊತ್ತಿಕೊಂಡ ಬೆಂಕಿಯು ಈ ದುರಂತಕ್ಕೆ ಕಾರಣ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಕಟ್ಟಡದಲ್ಲಿ ಒಂದೇ ಕಂಪನಿಯ 195 ಮಂದಿ ಕೆಲಸಗಾರರು ವಾಸಿಸುತ್ತಿದ್ದರು ಎನ್ನಲಾಗಿದೆ.
ಮೃತರಲ್ಲಿ ಹೆಚ್ಚಿನವರು ಭಾರತೀಯರಾಗಿದ್ದು, ಅವರೆಲ್ಲ 20ರಿಂದ 50 ವರ್ಷ ವಯಸ್ಸಿನ ನಡುವಿನವರು ಎಂದು ವಿಧಿವಿಜ್ಞಾನ ಇಲಾಖೆಯ ಮಹಾನಿರ್ದೇಶಕ ಮೇಜರ್ ಜನರಲ್ ಇದ್ ಅಲ್–ಒವೈಹಾನ್ ಅವರು ತಿಳಿಸಿದ್ದಾರೆ.
‘ಜುಲೈನಲ್ಲಿ ಊರಿಗೆ ಬರುವುದಾಗಿ ಹೇಳಿದ್ದ ರಂಜಿತ್’
ಕಾಸರಗೋಡು: ಕುವೈತ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಕೇರಳದ ಕನಿಷ್ಠ 13 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದ್ದು, ಕಾಸರಗೋಡಿನ ಚೆಂಗಳದ ನಿವಾಸಿಯಾಗಿರುವ ರಂಜಿತ್ ಕೂಡ ದುರಂತದಲ್ಲಿ ಮೃತರಾಗಿದ್ದಾರೆ ಎಂದು ತಿಳಿದುಬಂದಿದೆ.
ರಂಜಿತ್ ಸಾವಿನ ಸುದ್ದಿ ತಿಳಿದು ಇಡೀ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ.
ರಂಜಿತ್ ಅವರು ಒಂದೂವರೆ ವರ್ಷದ ಹಿಂದೆ ತಮ್ಮ ಹೊಸ ಮನೆಯ ಗೃಹಪ್ರವೇಶ ಮುಗಿಸಿ ಕುವೈತ್‌ಗೆ ತೆರಳಿದ್ದು, ಮುಂದಿನ ತಿಂಗಳು ಊರಿಗೆ ಮರಳಲು ಯೋಜಿಸಿದ್ದರು ಎಂದು ತಿಳಿದುಬಂದಿದೆ.
‘ಮನೆ ಕಟ್ಟಿ, ಗೃಹ ಪ್ರವೇಶ ಮುಗಿಸಿ ಕುವೈತ್ ಗೆ ಹೋಗಿದ್ದ ರಂಜಿತ್, ಜುಲೈನಲ್ಲಿ ಊರಿಗೆ ಬರುವುದಾಗಿ ಹೇಳಿದ್ದರು. ಅಷ್ಟರಲ್ಲೇ ಈ ದುರಂತ ನಡೆದು ಹೋಯಿತು’ ಎಂದು ಸುದ್ದಿ ವಾಹಿನಿಯೊಂದಕ್ಕೆ ನೆರಹೊರೆಯ ಜನರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.