ನವದೆಹಲಿ (ಪಿಟಿಐ): ದೇಶದ 173 ಉಷ್ಣ ವಿದ್ಯುತ್ ಸ್ಥಾವರಗಳ ಪೈಕಿ, 106 ಸ್ಥಾವರಗಳಲ್ಲಿ ಕಲ್ಲಿದ್ದಲು ಸಂಗ್ರಹ ಶೋಚನೀಯ ಮಟ್ಟಕ್ಕೆ ಕುಸಿದಿದೆ. ಉತ್ತರ ಭಾರತದಲ್ಲಿ ಬಿಸಿಗಾಳಿಯಿಂದಾಗಿ ವಿದ್ಯುತ್‌ಗೆ ಬೇಡಿಕೆ ಹೆಚ್ಚಾಗಿದೆ. ಆದರೆ ಕಲ್ಲಿದ್ದಲು ಕೊರತೆಯಿಂದ ವಿದ್ಯುತ್ ಉತ್ಪಾದಿಸಲು ಸಾಧ್ಯವಾಗದೆ, ವಿದ್ಯುತ್ ಕೊರತೆ ಉಂಟಾಗಿದೆ. ಉತ್ತರ ಭಾರತದ ಹಲವು ರಾಜ್ಯಗಳು ಲೋಡ್‌ಶೆಡ್ಡಿಂಗ್ ಮೊರೆ ಹೋಗಿವೆ.
ನಿಯಮಗಳ ಪ್ರಕಾರ, ಉಷ್ಣ ವಿದ್ಯುತ್ ಸ್ಥಾವರಗಳು ಕನಿಷ್ಠ 26 ದಿನಗಳಿಗೆ ಆಗುವಷ್ಟು ಕಲ್ಲಿದ್ದಲು ಸಂಗ್ರಹ ಹೊಂದಿರಬೇಕು. ಕಲ್ಲಿದ್ದಲು ಸಂಗ್ರಹವು 6.5 ದಿನಗಳಿಗೆ ಮಾತ್ರ ಆಗುವಷ್ಟರ ಮಟ್ಟಿಗೆ ಕುಸಿದರೆ, ಅದನ್ನು ಶೋಚನೀಯ ಮಟ್ಟ ಎಂದು ಕರೆಯಲಾಗುತ್ತದೆ. ಈ ಎಲ್ಲಾ ಸ್ಥಾವರಗಳಲ್ಲಿ ಇರುವ ಕಲ್ಲಿದ್ದಲು ಸಂಗ್ರಹದ ದೈನಂದಿನ ವರದಿಯನ್ನು ಕೇಂದ್ರೀಯ ವಿದ್ಯುತ್ ಪ್ರಾಧಿಕಾರವು ಬಿಡುಗಡೆ ಮಾಡುತ್ತದೆ.
ಗುರುವಾರ ತಡರಾತ್ರಿ ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ಒಟ್ಟು 106 ಸ್ಥಾವರಗಳಲ್ಲಿ ಸಂಗ್ರಹ ಶೇ 25ಕ್ಕಿಂತಲೂ ಕಡಿಮೆ ಮಟ್ಟಕ್ಕೆ ಕುಸಿದಿದೆ.150 ಸ್ಥಾವರಗಳಲ್ಲಿ ದೇಶೀಯ ಕಲ್ಲಿದ್ದಲನ್ನು ಬಳಸಲಾಗುತ್ತಿದೆ. ಇವುಗಳಲ್ಲಿ 86 ಸ್ಥಾವರಗಳಲ್ಲಿ ಕಲ್ಲಿದ್ದಲು ಸಂಗ್ರಹವು ಶೋಚನೀಯ ಮಟ್ಟಕ್ಕೆ ಕುಸಿದಿದೆ. ಕೆಲವು ಸ್ಥಾವರಗಳಲ್ಲಿ ಕೇವಲ ಒಂದೂವರೆ–ಎರಡು ದಿನಗಳಿಗೆ ಆಗುವಷ್ಟು ಸಂಗ್ರಹ ಮಾತ್ರ ಉಳಿದಿದೆ. ಆಮದು ಕಲ್ಲಿದ್ದಲು ಉಪಯೋಗಿಸುವ 12 ಸ್ಥಾವರಗಳಲ್ಲಿ ಕಲ್ಲಿದ್ದಲು ಸಂಗ್ರಹ ಶೋಚನೀಯ ಮಟ್ಟಕ್ಕೆ ಕುಸಿದಿದೆ.ಖಾಸಗಿ ವಲಯದ ಎಂಟು ಸ್ಥಾವರಗಳಲ್ಲಿ ಕಲ್ಲಿದ್ದಲು ಕೊರತೆ ಇದೆ.
ಅಖಿಲ ಭಾರತ ವಿದ್ಯುಚ್ಛಕ್ತಿ ಎಂಜಿನಿಯರ್‌ಗಳ ಒಕ್ಕೂಟವು (ಎಐಪಿಇಎಫ್) ಕಲ್ಲಿದ್ದಲು ಕೊರತೆ ಬಗ್ಗೆ ವಿಸ್ತೃತ ಹೇಳಿಕೆ ಬಿಡುಗಡೆ ಮಾಡಿದೆ.
ಉತ್ತರ ಭಾರತದಲ್ಲಿ ವಿದ್ಯುತ್ ಕೊರತೆ ಬಿಗಡಾಯಿಸಿದೆ. ಉತ್ತರ ವಲಯದಲ್ಲಿ ಒಟ್ಟು 1,346 ಲಕ್ಷ ಯೂನಿಟ್‌ಗಳಷ್ಟು ವಿದ್ಯುತ್ ಕೊರತೆಯಾಗಿದೆ. ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಜಮ್ಮು–ಕಾಶ್ಮೀರ, ರಾಜಸ್ಥಾನ ಮತ್ತು ಉತ್ತರಾಖಂಡದಲ್ಲಿ ಪ್ರತಿದಿನ ಮೂರರಿಂದ ಎಂಟು ತಾಸು ಲೋಡ್‌ಶೆಡ್ಡಿಂಗ್ ಜಾರಿಗೆ ತರಲಾಗಿದೆ. ರಾಜಸ್ಥಾನದ ಸರ್ಕಾರಿ ಸ್ವಾಮ್ಯದ ಸ್ಥಾವರಗಳ ಪೈಕಿ, ಆರರಲ್ಲಿ ಕಲ್ಲಿದ್ದಲು ಸಂಗ್ರಹ ಶೋಚನೀಯ ಮಟ್ಟಕ್ಕೆ ಕುಸಿದಿದೆ. ಉತ್ತರ ಪ್ರದೇಶ ನಾಲ್ಕು ಸ್ಥಾವರಗಳ ಪೈಕಿ, ಮೂರರಲ್ಲಿ ಕಲ್ಲಿದ್ದಲು ಸಂಗ್ರಹ ಶೋಚನೀಯ ಮಟ್ಟಕ್ಕೆ ಕುಸಿದಿದೆ ಎಂದು ಒಕ್ಕೂಟವು ಹೇಳಿದೆ.
ಮಹಾರಾಷ್ಟ್ರದ ಏಳು ಸ್ಥಾವರಗಳ ಪೈಕಿ ಆರರಲ್ಲಿ, ಮಧ್ಯಪ್ರದೇಶದ ನಾಲ್ಕರಲ್ಲಿ ಮೂರು ಸ್ಥಾವರಗಳಲ್ಲಿ ಕಲ್ಲಿದ್ದಲು ಸಂಗ್ರಹ ಶೋಚನೀಯಮಟ್ಟಕ್ಕೆ ಕುಸಿದಿದೆ. ಆಂಧ್ರಪ್ರದೇಶ, ಪಶ್ಚಿಮಬಂಗಾಳ, ಕರ್ನಾಟಕ ಮತ್ತು ತಮಿಳುನಾಡಿನ ಎಲ್ಲಾ ಸರ್ಕಾರಿ ಸ್ವಾಮ್ಯದ ಸ್ಥಾವರಗಳಲ್ಲಿ ಕಲ್ಲಿದ್ದಲು ಸಂಗ್ರಹ ಶೋಚನೀಯ ಮಟ್ಟಕ್ಕೆ ಕುಸಿದಿದೆ ಎಂದು ಒಕ್ಕೂಟವು ಮಾಹಿತಿ ನೀಡಿದೆ.
‘ಸರ್ಕಾರ ಸಮಸ್ಯೆ ಮರೆಮಾಚಿದೆ’
‘ಕೇಂದ್ರ ಸರ್ಕಾರದ ಕಲ್ಲಿದ್ದಲು ಸಚಿವಾಲಯ, ರೈಲ್ವೆ ಇಲಾಖೆ ಮತ್ತು ಇಂಧನ ಸಚಿವಾಲಯಗಳ ನಡುವಣ ಸಮನ್ವಯದ ಕೊರತೆಯ ಕಾರಣದಿಂದ ದೇಶದಲ್ಲಿ ವಿದ್ಯುತ್ ಕೊರತೆ ಉಂಟಾಗಿದೆ’ ಎಂದು ಅಖಿಲ ಭಾರತ ವಿದ್ಯುಚ್ಛಕ್ತಿ ಎಂಜಿನಿಯರ್‌ಗಳ ಒಕ್ಕೂಟ ಆರೋಪಿಸಿದೆ.
‘ಈ ಸಚಿವಾಲಯಗಳ ನಡುವಣ ಸಮನ್ವಯದ ಕೊರತೆಯಿಂದ ಕಲ್ಲಿದ್ದಲು ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಕಲ್ಲಿದ್ದಲು ಪೂರೈಕೆಯಾಗದೇ ಇರುವುದರಿಂದ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ಸಂಗ್ರಹ ಶೋಚನೀಯ ಮಟ್ಟಕ್ಕೆ ಕುಸಿದಿದೆ. ಆದರೆ, ಈ ಎಲ್ಲಾ ಸಚಿವಾಲಯಗಳು ಇದಕ್ಕೆ ನಾವು ಹೊಣೆ ಅಲ್ಲ ಎನ್ನುತ್ತಿವೆ’ ಎಂದು ಒಕ್ಕೂಟವು ಆರೋಪಿಸಿದೆ.
‘ನಿಜವಾದ ಸಮಸ್ಯೆಯನ್ನು ಕೇಂದ್ರ ಸರ್ಕಾರವು ಮರೆಮಾಚಿದೆ. ಕಲ್ಲಿದ್ದಲು ಕಂಪನಿಗಳಿಗೆ ರಾಜ್ಯ ಸರ್ಕಾರಗಳು ಹಣ ಪಾವತಿ ಮಾಡದೇ ಇರುವು ದನ್ನೇ ಮುನ್ನೆಲೆಗೆ ತರುತ್ತಿದೆ’ ಎಂದು ಒಕ್ಕೂಟದ ವಕ್ತಾರ ವಿ.ಕೆ.ಗುಪ್ತಾ ಆರೋಪಿಸಿದ್ದಾರೆ.
ರಾಷ್ಟ್ರೀಯ ಬಿಕ್ಕಟ್ಟು ಘೋಷಿಸಿ ಸಿ.ಎಂ ಅಶೋಕ್ ಗೆಹಲೋತ್
‘ಬಿಸಿಗಾಳಿಯ ಪರಿಣಾಮವಾಗಿ ದೇಶದ 16 ರಾಜ್ಯಗಳಲ್ಲಿ ವಿದ್ಯುತ್‌ಗೆ ಬೇಡಿಕೆ ಹೆಚ್ಚಾಗಿದೆ. ಆದರೆ ಬೇಡಿಕೆಯಷ್ಟು ವಿದ್ಯುತ್ ಉತ್ಪಾದಿಸಲು ಅಗತ್ಯವಿರುವ ಕಲ್ಲಿದ್ದಲು ಪೂರೈಕೆಯಾಗುತ್ತಿಲ್ಲ. ಹೀಗಾಗಿ ಇದನ್ನು ರಾಷ್ಟ್ರೀಯ ಬಿಕ್ಕಟ್ಟು ಎಂದು ಘೋಷಿಸಬೇಕು. ಅಗತ್ಯವಿರುವಷ್ಟು ಕಲ್ಲಿದ್ದಲು ಪೂರೈಸುವುದು ಕೇಂದ್ರ ಸರ್ಕಾರದ ಕೆಲಸ. ಕಲ್ಲಿದ್ದಲು ಪೂರೈಸಲು ಕೇಂದ್ರ ಸರ್ಕಾರಕ್ಕೆ ಏಕೆ ಸಾಧ್ಯವಾಗುತ್ತಿಲ್ಲ’ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.