ನವದೆಹಲಿ: ಕಲ್ಲಿದ್ದಲು ಸಾಗಣೆ ರೈಲುಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಸಲುವಾಗಿ ರೈಲ್ವೆ ಇಲಾಖೆಯು 657 ಪ್ರಯಾಣಿಕ ರೈಲು ಗಳ ಸಂಚಾರವನ್ನು ರದ್ದು ಮಾಡಿದೆ. ಕಲ್ಲಿದ್ದಲು ಕೊರತೆ ಎದುರಿಸುತ್ತಿರುವ ಉಷ್ಣ ವಿದ್ಯುತ್ ಸ್ಥಾವರಗಳಿಗೆ ತ್ವರಿತವಾಗಿ ಕಲ್ಲಿದ್ದಲನ್ನು ಸಾಗಿಸುವ ಉದ್ದೇಶದಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಭಾರತೀಯ ರೈಲ್ವೆಯ ಹೆಚ್ಚುವರಿ ಮಹಾ ನಿರ್ದೇಶಕ ರಾಜೀವ್ ಜೈನ್ ಹೇಳಿದ್ದಾರೆ.
ದೇಶದ 100ಕ್ಕೂ ಹೆಚ್ಚು ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲಿನ ಸಂಗ್ರಹ ಶೋಚನೀಯ ಮಟ್ಟಕ್ಕೆ ಕುಸಿದಿದೆ. ಈ ಸ್ಥಾವರಗಳಿಗೆ ತಕ್ಷಣವೇ ಕಲ್ಲಿದ್ದಲನ್ನು ಪೂರೈಕೆ ಮಾಡಬೇಕು ಎಂದು ರಾಜ್ಯ ಸರ್ಕಾರಗಳು ಕೇಂದ್ರವನ್ನು ಒತ್ತಾಯಿಸಿದ್ದವು.
‘ಮೇಲ್, ಎಕ್ಸ್‌ಪ್ರೆಸ್ ಮತ್ತು ಸಾಮಾನ್ಯಪ್ರಯಾಣಿಕ ರೈಲುಗಳು ಸೇರಿ ಒಟ್ಟು 657 ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ. ಇದು ಏಪ್ರಿಲ್ 28ರ ರಾತ್ರಿಯಿಂದ ಮೇ ಮೂರನೇ ವಾರದವರೆಗೆ ಅನ್ವಯವಾಗಲಿದೆ. ದಟ್ಟಣೆಇಲ್ಲದೇ ಇರುವ ಮಾರ್ಗಗಲ್ಲಿನ ರೈಲುಗಳನ್ನು ಮಾತ್ರ ರದ್ದು ಪಡಿಸಲಾಗಿದೆ’ ಎಂದು ರಾಜೀವ್ ಮಾಹಿತಿ ನೀಡಿದ್ದಾರೆ.
‘ಗುರುವಾರ 427 ರೈಲುಗಳಿಗೆ 16.2 ಲಕ್ಷ ಟನ್ ಕಲ್ಲಿದ್ದಲು ಭರ್ತಿ ಮಾಡಲಾಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.
ಉಷ್ಣ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲನ್ನು ತ್ವರಿತವಾಗಿ ಪೂರೈಕೆ ಮಾಡಲು ಪ್ರತಿದಿನ 422 ರೈಲುಗಳ ಅವಶ್ಯಕತೆ ಇದೆ. ಆ ರೈಲುಗಳ ವ್ಯವಸ್ಥೆ ಮಾಡಿ ಎಂದು ಕಲ್ಲಿದ್ದಲು ಸಚಿವಾಲಯವು, ರೈಲ್ವೆ ಸಚಿವಾಲಯಕ್ಕೆ ಈ ವಾರದ ಆರಂಭದಲ್ಲಿ ಮನವಿ ಮಾಡಿಕೊಂಡಿತ್ತು.
ವಿದ್ಯುತ್ ಬೇಡಿಕೆ ಏರಿಕೆ:ದೇಶದಲ್ಲಿ ಬಿಸಿಗಾಳಿಯ ಪರಿಣಾಮವಾಗಿ ಫ್ಯಾನ್ ಮತ್ತು ಹವಾನಿಯಂತ್ರಣ ವ್ಯವಸ್ಥೆಯ ಬಳಕೆ ವಿಪರೀತ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದರಿಂದ ಏಪ್ರಿಲ್ ತಿಂಗಳೊಂದರಲ್ಲೇ ವಿದ್ಯುತ್ ಬೇಡಿಕೆಯಲ್ಲಿ ಶೇ 12ರಷ್ಟು ಏರಿಕೆಯಾಗಿದೆ ಎಂದು ಇಂಧನ ಸಚಿವಾಲಯ ಹೇಳಿದೆ.
‘ಒಂದು ದಿನಕ್ಕಾಗುವಷ್ಟು ಮಾತ್ರ ಸಂಗ್ರಹ’
‘ದೆಹಲಿಯ ಎಲ್ಲಾ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ಸಂಗ್ರಹ ಶೋಚನೀಯ ಮಟ್ಟಕ್ಕೆ ಕುಸಿದಿದೆ. ಇನ್ನು ಒಂದು ದಿನಕ್ಕಾಗುವಷ್ಟು ಕಲ್ಲಿದ್ದಲು ಮಾತ್ರ ಇದೆ’ ಎಂದು ದೆಹಲಿ ಇಂಧನ ಸಚಿವ ಸತ್ಯೇಂದರ್ ಜೈನ್ ಅವರು ಹೇಳಿದ್ದಾರೆ.
‘ಕಲ್ಲಿದ್ದಲು ಪೂರೈಕೆಗೆ ರೈಲು ವ್ಯವಸ್ಥೆ ಮಾಡದೇ ಇರುವುದರಿಂದ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಕಲ್ಲಿದ್ದಲು ಸಂಗ್ರಹ ಮುಗಿದು, ಸ್ಥಾವರಗಳು ಸ್ಥಗಿತವಾದರೆ ಪರಿಸ್ಥಿತಿ ಬಿಗಡಾಯಿಸುತ್ತದೆ. ದೆಹಲಿ ಮೆಟ್ರೊ ಮತ್ತು ಆಸ್ಪತ್ರೆಗಳಿಗೆ ವಿದ್ಯುತ್ ಪೂರೈಸುವುದೂ ಕಷ್ಟವಾಗುತ್ತದೆ’ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಆದರೆ, ‘ದೆಹಲಿಗೆ ವಿದ್ಯುತ್ ಪೂರೈಸುವ ದಾದ್ರಿ ಉಷ್ಣ ವಿದ್ಯುತ್ ಸ್ಥಾವರದ ಆರು ಘಟಕಗಳು ಮತ್ತು ಉನ್‌ಚಹಾರ್ ಘಟಕದ ಐದು ಘಟಕಗಳು ಶೇ 100ರಷ್ಟು ಕಾರ್ಯನಿರ್ವಹಿಸುತ್ತಿವೆ. ಈ ಸ್ಥಾವರಗಳಿಗೆ ಕಲ್ಲಿದ್ದಲು ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ. ಉನ್‌ಚಹಾರ್ ಸ್ಥಾವರದ ಒಂದು ಘಟಕವನ್ನು ವಾರ್ಷಿಕ ನಿರ್ವಹಣೆ ಸಲುವಾಗಿ ಸ್ಥಗಿತಗೊಳಿಸಲಾಗಿದೆ’ ಎಂದು ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.