ನವದೆಹಲಿ: ಲಡಾಖ್‌ನ ಒಂದಿಷ್ಟು ಭಾಗವನ್ನು ಚೀನಾ ಅತಿಕ್ರಮಿಸಿದ್ದರೂ ಪ್ರಧಾನಿ ನರೇಂದ್ರ ಮೋದಿ ಮೌನವಾಗಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
‘ಉಭಯ ದೇಶಗಳ ಮಾತುಕತೆ ವೇಳೆ ಚೀನಾ ಗಟ್ಟಿ ನಿಲುವು ತಳೆದಿದ್ದು, ಇಡೀ ಗಾಲ್ವಾನ್ ಕಣಿವೆ ಹಾಗೂ ಪಾಂಗೊಂಗ್ ಟ್ಸೊನ ಕೆಲ ಭಾಗ ತನ್ನದೆಂದು ಹೇಳಿಕೊಂಡಿದೆ’ ಎಂಬ ಉಲ್ಲೇಖವಿರುವ ಪತ್ರಿಕೆಯೊಂದರ ವರದಿಯನ್ನು ರಾಹುಲ್ ಗಾಂಧಿ ಬುಧವಾರವಷ್ಟೇ ಟ್ವಿಟರ್‌ನಲ್ಲಿ ಟ್ಯಾಗ್ ಮಾಡಿದ್ದರು.
ಚೀನಾದ ಸೇನೆಯನ್ನು ಹಿಮ್ಮೆಟ್ಟಿಸಲು ಸರ್ಕಾರ ಯಾವ ಕ್ರಮ ತೆಗೆದುಕೊಂಡಿದೆ ಎಂದು ದೇಶದ ಜನರಿಗೆ ತಿಳಿಸಬೇಕು ಎಂದು ಪಕ್ಷದ ವಕ್ತಾರ ಮನೀಶ್ ತಿವಾರಿ ಒತ್ತಾಯಿಸಿದ್ದಾರೆ.
ಚೀನಾ ಅತಿಕ್ರಮಣದ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ನುಣುಚಿಕೊಳ್ಳುವ ಹಾಗೂ ಬೇಜವಾಬ್ದಾರಿಯಿಂದ ಮಾತನಾಡಿದ್ದಾರೆ ಎಂದು ತಿವಾರಿ ದೂರಿದ್ದಾರೆ.
‘ಲಡಾಖ್‌ನಲ್ಲಿ ಏನಾಗಿದೆ ಎಂಬ ಸತ್ಯವನ್ನು ಜನರಿಗೆ ತಿಳಿಸುವ ಬದಲು ಪ್ರಸಾದ್ ಅವರು ಅಪ್ರಜ್ಞಾಪೂರ್ವಕವಾಗಿ ನಡೆದುಕೊಂಡಿರುವುದು ದುರದೃಷ್ಟಕರ’ ಎಂದು ತಿವಾರಿ ಹೇಳಿದ್ದಾರೆ.
ಇಡೀ ದೇಶ ಒಂದೇ ಧ್ವನಿಯಲ್ಲಿ ಮಾತನಾಡಬೇಕಾದ ಸಮಯದಲ್ಲಿ ದೇಶದ ಭದ್ರತೆಯಂತಹ ಸೂಕ್ಷ್ಮ ವಿಷಯಗಳನ್ನು ರಾಹುಲ್ ಗಾಂಧಿ ಅವರು ಟ್ವಿಟರ್‌ನಲ್ಲಿ ಪ್ರಸ್ತಾಪಿಸಿದ್ದಾರೆ ಎಂದು ರವಿಶಂಕರ್ ಪ್ರಸಾದ್ ಆರೋಪಿಸಿದ್ದರು.
ಇದಕ್ಕೆ ತಿರುಗೇಟು ನೀಡಿರುವ ತಿವಾರಿ, ದೇಶಭಕ್ತಿ, ರಾಷ್ಟ್ರೀಯತೆ ವಿಚಾರಗಳು ಬಿಜೆಪಿಯ ಏಕಸ್ವಾಮ್ಯಗಳಲ್ಲ. ಸರ್ಕಾರಕ್ಕೆ ಪ್ರಶ್ನೆ ಕೇಳಿದರೆ ದೇಶಾಭಿಮಾನ ಇಲ್ಲ ಎಂದಲ್ಲ. ಆ ಪ್ರಶ್ನೆಗಳಿಗೆ ಉತ್ತರಿಸದಿದ್ದರೆ ಅದು ನಿರಭಿಮಾನ ಎನಿಸಿಕೊಳ್ಳುತ್ತದೆ’ ಎಂದು ತಿವಾರಿ ಚಾಟಿ ಬೀಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.