ADVERTISEMENT

ತಿರುಪತಿಯಲ್ಲಿ ಸಂಪ್ರೋಕ್ಷಣ ಕಾರ್ಯ: ಚಂದ್ರಬಾಬು ನಾಯ್ಡು

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2024, 23:30 IST
Last Updated 21 ಸೆಪ್ಟೆಂಬರ್ 2024, 23:30 IST
<div class="paragraphs"><p>ಎನ್. ಚಂದ್ರಬಾಬು ನಾಯ್ಡು </p></div>

ಎನ್. ಚಂದ್ರಬಾಬು ನಾಯ್ಡು

   

–‍ಪಿಟಿಐ ಚಿತ್ರ

ಹೈದರಾಬಾದ್/ಅಮರಾವತಿ: ತಿರುಪತಿ ದೇವಸ್ಥಾನದ ಲಾಡು ಸಿದ್ಧಪಡಿಸಲು ಬಳಸುವ ತುಪ್ಪದಲ್ಲಿ ಪ್ರಾಣಿಯ ಕೊಬ್ಬು ಪತ್ತೆಯಾದ ನಂತರ ಹಿಂದೂಗಳಿಂದ ವಿಶ್ವದ ಎಲ್ಲೆಡೆ ಕಳವಳ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ದೇವಸ್ಥಾನದ ಶುದ್ಧೀಕರಣದ ಬಗ್ಗೆ ಚಿಂತನೆ ಶುರುವಾಗಿದೆ.

ADVERTISEMENT

‘ಟಿಟಿಡಿ ವಿಚಾರವಾಗಿ ಏನು ಮಾಡಬೇಕು ಹಾಗೂ ಅದನ್ನು ಹೇಗೆ ಮಾಡಬೇಕು ಎಂಬ ಬಗ್ಗೆ ನಾವು ಚರ್ಚಿಸುತ್ತಿದ್ದೇವೆ. ಸಂಪ್ರೋಕ್ಷಣ (ವಿಧಿಬದ್ಧವಾದ ಶುದ್ಧೀಕರಣ ಕಾರ್ಯ) ಹೇಗೆ ನಡೆಯಬೇಕು ಎಂಬುದನ್ನು ನಾವು ಜೀಯರ್‌ಗಳು, ಕಂಚಿ ಪೀಠಾಧಿಪತಿಗಳು, ಸನಾತದ ಧರ್ಮದ ವಿದ್ವಾಂಸರ ಜೊತೆ ಚರ್ಚಿಸಿ ತೀರ್ಮಾನಿಸುತ್ತೇವೆ. ನಾವು ಈ ನಿಟ್ಟಿನಲ್ಲಿ ಈಗಾಗಲೇ ಆಲೋಚನೆ ನಡೆಸಿದ್ದೇವೆ’ ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಸುದ್ದಿಗಾರರಿಗೆ ತಿಳಿಸಿದರು.

ಸಂಪ್ರೋಕ್ಷಣ ಕಾರ್ಯ ನಡೆಸುವುದರಿಂದ ದೇವರ ಆಶೀರ್ವಾದ ಪ್ರಾಪ್ತಿಯಾಗುತ್ತದೆ, ಸಮೃದ್ಧಿ ನೆಲಸುತ್ತದೆ ಮತ್ತು ಆಧ್ಯಾತ್ಮಿಕ ಶಾಂತಿ ಸಿಗುತ್ತಿದೆ ಎಂಬ ನಂಬಿಕೆ ಇದೆ.

ಸಂಪ್ರೋಕ್ಷಣ ಕಾರ್ಯದ ಭಾಗವಾಗಿ ಮೂರು ದಿನಗಳ ಶಾಂತಿ ಹೋಮ ನಡೆಸುವ ಆಲೋಚನೆಯನ್ನು ತಿರುಪತಿ ತಿರುಮಲ ದೇವಸ್ಥಾನಂ (ಟಿಟಿಡಿ) ಹೊಂದಿದೆ. ವೈದಿಕ ವಿದ್ವಾಂಸರು ಮತ್ತು ತಿರುಮಲ ದೇವಸ್ಥಾನದ ಅರ್ಚಕರು ಶಾಂತಿ ಹೋಮದ ಬಗ್ಗೆ ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಜೆ. ಶ್ಯಾಮಲ ರಾವ್ ಜೊತೆ ಚರ್ಚಿಸಿದರು. ಶಾಂತಿ ಹೋಮ ಮತ್ತು ಸಂಪ್ರೋಕ್ಷಣ ಕಾರ್ಯದ ದಿನಾಂಕವು ಭಾನುವಾರ ಅಂತಿಮಗೊಳ್ಳುವ ನಿರೀಕ್ಷೆ ಇದೆ.

ದೇವಸ್ಥಾನಗಳ ಪಾವಿತ್ರ್ಯ ಹಾಗೂ ಭಕ್ತರ ಭಾವನೆಗಳಿಗೆ ತಮ್ಮ ಸರ್ಕಾರವು ಅತ್ಯಂತ ಹೆಚ್ಚಿನ ಆದ್ಯತೆ ನೀಡುತ್ತದೆ ಎಂದು ನಾಯ್ಡು ಸ್ಪಷ್ಟಪಡಿಸಿದರು.

ಪ್ರತಿ ಧರ್ಮಕ್ಕೂ ಅದರದ್ದೇ ಆದ ಸಂಪ್ರದಾಯ, ಬದ್ಧತೆಗಳು ಇರುತ್ತವೆ. ಸರ್ಕಾರವು ಅವುಗಳನ್ನು ಗೌರವಿಸಬೇಕು ಎಂದು ನಾಯ್ಡು ಹೇಳಿದರು. ಹಿಂದಿನ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿನ ದೇವಸ್ಥಾನಗಳಲ್ಲಿ ಅತಿಕ್ರಮಣಗಳು ನಡೆದಿವೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ರಾಮತೀರ್ಥಂನಲ್ಲಿ ರಾಮನ ವಿಗ್ರಹದ ತಲೆಯನ್ನು ಕಡಿದಾಗ ಕೂಡ ಯಾರ ವಿರುದ್ಧವೂ ಕ್ರಮ ಜರುಗಿಸಲಿಲ್ಲ ಎಂದರು.

ಹಿಂದಿನ ಮುಖ್ಯಮಂತ್ರಿ ವೈ.ಎಸ್. ಜಗನ್‌ ಮೋಹನ ರೆಡ್ಡಿ, ವೈಎಸ್‌ಆರ್‌ಸಿಪಿ ಆಡಳಿತದ ಅವಧಿಯಲ್ಲಿ ಟಿಟಿಡಿ ಅಧ್ಯಕ್ಷರಾಗಿದ್ದ ವೈ.ವಿ. ಸುಬ್ಬಾರೆಡ್ಡಿ ಮತ್ತು ಭುಮನ ಕರುಣಾಕರ ರೆಡ್ಡಿ, ಟಿಟಿಡಿ ಮಾಜಿ ಕಾರ್ಯನಿರ್ವಹಣಾ ಅಧಿಕಾರಿ ಎ. ಧರ್ಮ ರೆಡ್ಡಿ ಅವರನ್ನು ಬಂಧಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಒತ್ತಾಯಿಸಿದೆ.

ಆಂಧ್ರ ಪ್ರದೇಶ ರಾಜ್ಯಪಾಲ ಅಬ್ದುಲ್ ನಜೀರ್ ಅವರನ್ನು ಭೇಟಿ ಮಾಡಿರುವ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ವೈ.ಎಸ್. ಶರ್ಮಿಳಾ ಅವರು ಲಾಡು ಪ್ರಕರಣದ ಕುರಿತು ಸಿಬಿಐ ತನಿಖೆಗೆ ಆದೇಶಿಸುವಂತೆ ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.