ADVERTISEMENT

ತುಪ್ಪದ ಕಲಬೆರಕೆ, ಟಿಟಿಡಿ ಪಾವಿತ್ರ್ಯಕ್ಕೆ ಧಕ್ಕೆ: ನಾಯ್ಡು

ಜನರ ದಿಕ್ಕು ತಪ್ಪಿಸುವ ಯತ್ನ– ಜಗನ್‌ * ದೇಶದಾದ್ಯಂತ ಸುದ್ದು ಮಾಡುತ್ತಿರುವ ವಿವಾದ

ಪಿಟಿಐ
Published 21 ಸೆಪ್ಟೆಂಬರ್ 2024, 0:27 IST
Last Updated 21 ಸೆಪ್ಟೆಂಬರ್ 2024, 0:27 IST
ತಿರುಮಲ ತಿರುಪತಿ ದೇಗುಲ
ತಿರುಮಲ ತಿರುಪತಿ ದೇಗುಲ   

ಅಮರಾವತಿ/ ಹೈದರಾಬಾದ್‌: ತಿರುಪತಿಯ ಪ್ರಸಾದ ಲಾಡು ತಯಾರಿಕೆಯಲ್ಲಿ ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬಿನ ಅಂಶ ಬಳಸಲಾಗಿದೆ ಎಂಬ ವಿವಾದವು ಆಂಧ್ರಪ್ರದೇಶವಷ್ಟೇ ಅಲ್ಲದೇ ದೇಶದಾದ್ಯಂತ ಸದ್ದುಮಾಡಿದೆ.

ದೇವಸ್ಥಾನದ ಪಾವಿತ್ರ್ಯ, ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂಬ ಆರೋಪ ವಿವಿಧೆಡೆ ಕೇಳಿಬಂದಿದೆ. ಆಂಧ್ರ ಮತ್ತು ದೇಶದ ವಿವಿಧೆಡೆ ರಾಜಕೀಯ ನಾಯಕರ ವಾಗ್ವಾದವೂ ಜೋರಾಗಿದೆ.

ನಾಯ್ಡು ಆರೋಪ:

ADVERTISEMENT

ರಾಜ್ಯದಲ್ಲಿ ಹಿಂದಿದ್ದ ವೈಎಸ್‌ಆರ್‌ಸಿಪಿ ಸರ್ಕಾರವು ತಿರುಪತಿಯ ಪ್ರಸಾದ ತಯಾರಿಕೆಗೆ ಅಗ್ಗದ ಬೆಲೆಯ ಕಲಬೆರಕೆ ತುಪ್ಪವನ್ನು ಖರೀದಿಸುವ ಮೂಲಕ ಟಿಟಿಡಿಯ ಪಾವಿತ್ರ್ಯಕ್ಕೆ ಧಕ್ಕೆ ತಂದಿದೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ಆರೋಪಿಸಿದರು.

ಪ್ರಕಾಶಂ ಜಿಲ್ಲೆಯಲ್ಲಿ ಶುಕ್ರವಾರ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಈ ವಿಷಯದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

‘ಕ್ಷಮಿಸಲಾಗದ ತಪ್ಪು’ ಎಸಗಿದವರನ್ನು ಹಾಗೆಯೇ ಬಿಡಬೇಕೇ ಎಂದು ಅವರು ಇದೇ ವೇಳೆ ನೆರೆದಿದ್ದ ಜನರನ್ನು ಕೇಳಿದರು. ವೈ.ಎಸ್‌.ಜಗನ್‌ಮೋಹನ್‌ ರೆಡ್ಡಿ ನೇತೃತ್ವದ ಹಿಂದಿನ ಸರ್ಕಾರವು ಈ ಕ್ರಮ ಕೈಗೊಳ್ಳುವ ಮೂಲಕ ಜನರ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಅವರು ದೂರಿದರು.

ಜಗನ್‌ ತಿರುಗೇಟು:

‘ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ರಾಜಕೀಯ ಲಾಭಕ್ಕಾಗಿ ದೇವರನ್ನೂ ಬಳಸಿಕೊಳ್ಳುವ ಮಟ್ಟಕ್ಕೆ ಇಳಿದಿದ್ದಾರೆ. ಆ ಮೂಲಕ ಅವರು ಕೋಟ್ಯಂತರ ಭಕ್ತರ ಭಾವನೆಗಳ ಜತೆ ಆಟವಾಡುತ್ತಿದ್ದಾರೆ. ಇದು ಸರಿಯಲ್ಲ’ ಎಂದು ವೈಎಸ್‌ಆರ್‌ಸಿಪಿ ಮುಖ್ಯಸ್ಥ ವೈ.ಎಸ್‌.ಜಗನ್‌ಮೋಹನ್‌ ರೆಡ್ಡಿ ತಿರುಗೇಟು ನೀಡಿದರು.

‘ನಾಯ್ಡು ಅವರ 100 ದಿನಗಳ ಆಡಳಿತಕ್ಕೆ ಸಂಬಂಧಿಸಿದಂತೆ ರಾಜ್ಯದ ಜನರು ಆಕ್ರೋಶಗೊಂಡಿದ್ದಾರೆ. ಹೀಗಾಗಿ ಜನರ ದಿಕ್ಕು ತಪ್ಪಿಸಲು ಕಲಬೆರಕೆ ವಿವಾದವನ್ನು ಸೃಷ್ಟಿಸಿದ್ದಾರೆ’ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

‘ಕೋಟ್ಯಂತರ ಭಕ್ತರ ಭಾವನೆಗಳ ಜತೆ ಆಟವಾಡುವುದು ಸರಿಯಾ’ ಎಂದು ಪ್ರಶ್ನಿಸಿದ ಅವರು, ‘ಎಲ್ಲ ಮಾದರಿಗಳ ಪರೀಕ್ಷೆ ಮತ್ತು ಫಲಿತಾಂಶಗಳು ಎನ್‌ಡಿಎ ಸರ್ಕಾರದ ಅಡಿಯಲ್ಲಿರುವ ಪ್ರಯೋಗಾಲಯಗಳಿಂದಲೇ ಬಂದಿವೆ’ ಎಂದು ಹೇಳಿದರು.

ತಿರುಪತಿ ಲಡ್ಡುಗಳ ಪಾವಿತ್ರ್ಯಕ್ಕೆ ಧಕ್ಕೆ ಬಂದಿದ್ದರೆ ಪೂರ್ಣ ಪ್ರಮಾಣದಲ್ಲಿ ತನಿಖೆಯಾಗಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು
ಪವನ್‌ ಖೇರಾ ಕಾಂಗ್ರೆಸ್‌ನ ಮಾಧ್ಯಮ ವಿಭಾಗದ ಮುಖ್ಯಸ್ಥ
ಆಂಧ್ರ ಮುಖ್ಯಮಂತ್ರಿ ಬಹಳ ಗಂಭೀರವಾದ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಈ ಆರೋಪಗಳ ಬಗ್ಗೆ ವಿಸ್ತೃತ ತನಿಖೆ ನಡೆದು ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು
ಪ್ರಹ್ಲಾದ್‌ ಜೋಶಿ ಕೇಂದ್ರ ಆಹಾರ ಸಚಿವ
ಪ್ರಯೋಗಾಲಯದಿಂದ ಬಂದ ನಾಲ್ಕು ವರದಿಗಳಲ್ಲೂ ಒಂದೇ ರೀತಿಯ ಫಲಿತಾಂಶ ವ್ಯಕ್ತವಾಗಿದೆ. ಹೀಗಾಗಿ ಪೂರೈಕೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ
ಜೆ. ಶ್ಯಾಮಲ ರಾವ್‌ ಟಿಟಿಡಿ ಕಾರ್ಯಕಾರಿ ಅಧಿಕಾರಿ

ನಂದಿನಿ ತುಪ್ಪ‍ ಖರೀದಿ: ನಾಯ್ಡು

‘ಕಲಬೆರಕೆ ತುಪ್ಪ ಪೂರೈಸುತ್ತಿದ್ದ ಪೂರೈಕೆದಾರನ್ನು ನಾವು ಬದಲಿಸಿದ್ದೇವೆ. ಕರ್ನಾಟಕದಿಂದ ನಂದಿನಿ ಬ್ರಾಂಡ್‌ ತುಪ್ಪ ಖರೀದಿಸಲು ಪ್ರಾರಂಭಿಸಿದ್ದೇವೆ’ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ತಿಳಿಸಿದರು.

ಲಾಡು ವಿವಾದ: ಇದೇ 25ಕ್ಕೆ ಹೈಕೋರ್ಟ್‌ ವಿಚಾರಣೆ

ಅಮರಾವತಿ: ತಿರುಪತಿ ಪ್ರಸಾದ ಲಾಡುಗಳ ತಯಾರಿಕೆಗೆ ಪ್ರಾಣಿಗಳ ಕೊಬ್ಬಿನ ಅಂಶವನ್ನು ಬಳಸಲಾಗಿದೆ ಎಂಬ ವಿವಾದದ ಕುರಿತು ತುರ್ತು ವಿಚಾರಣೆಗೆ ಕೋರಿ ವೈಎಸ್‌ಆರ್‌ಸಿಪಿ ನಾಯಕ ವೈ.ವಿ.ಸುಬ್ಬಾರೆಡ್ಡಿ ಅವರು ಆಂಧ್ರಪ್ರದೇಶದ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅದರ ವಿಚಾರಣೆಗೆ ಒಪ್ಪಿಗೆ ಸೂಚಿಸಿರುವ ಹೈಕೋರ್ಟ್‌ ಇದೇ 25ರಂದು ವಿಚಾರಣೆ ನಡೆಸುವುದಾಗಿ ತಿಳಿಸಿದೆ. ಈ ವಿವಾದದ ಸತ್ಯಾಸತ್ಯತೆ ತಿಳಿಯಬೇಕಿದೆ ಎಂದು ಸುಬ್ಬಾರೆಡ್ಡಿ ಅರ್ಜಿಯಲ್ಲಿ ಕೋರಿದ್ದಾರೆ.   ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬಿನ ಅಂಶ ಇರುವ ಆರೋಪದ ಕುರಿತು ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಯಿಂದ ತನಿಖೆಯಾಬೇಕು. ಇಲ್ಲವೇ ತನಿಖೆಗಾಗಿ ಹೈಕೋರ್ಟ್‌ ಸಮಿತಿ ರಚಿಸಲಿ ಅಥವಾ ಸಿಬಿಐ ತನಿಖೆ ಮಾಡಲಿ ಎಂದು ಅವರು ಸುಬ್ಬಾರೆಡ್ಡಿ ಪರವ ವಕೀಲ ಸುಧಾಕರ ರೆಡ್ಡಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

ಧಾರ್ಮಿಕ ಭಾವನೆಗೆ ಗಾಸಿ: ‘ಸುಪ್ರೀಂ’ಗೆ ಅರ್ಜಿ

ನವದೆಹಲಿ: ತಿರುಪತಿ ಲಾಡು ತಯಾರಿಕೆಗೆ ಪ್ರಾಣಿಗಳ ಕೊಬ್ಬಿನ ಅಂಶವನ್ನು ಬಳಸುವ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಗಾಸಿಗೊಳಿಸಿದಂತಾಗಿದೆ ಎಂದು ಆರೋಪಿಸಿ ವಕೀಲರೊಬ್ಬರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅಸಂಖ್ಯಾತ ಭಕ್ತರು ಪವಿತ್ರ ಎಂದು ಭಾವಿಸಿ ಪ್ರಸಾದವನ್ನು ಸ್ವೀಕರಿಸುತ್ತಾರೆ. ಆದರೆ ಈಗ ಹಿಂದೂಗಳ ಧಾರ್ಮಿಕ ಪದ್ಧತಿಗಳ ಉಲ್ಲಂಘನೆ ಆಗಿದೆ ಎಂದು ವಕೀಲ ಸತ್ಯಂ ಸಿಂಗ್ ಅರ್ಜಿಯಲ್ಲಿ ತಿಳಿಸಿದ್ದಾರೆ. ಹಿಂದೂಗಳ ಧಾರ್ಮಿಕ ಆಚರಣೆಗಳ ಪಾವಿತ್ರ್ಯತೆಯನ್ನು ರಕ್ಷಿಸುವ ಮತ್ತು ಧಾರ್ಮಿಕ ಸಂಸ್ಥೆಗಳ ಸರಿಯಾದ ನಿರ್ವಹಣೆಯನ್ನು ಖಾತರಿಪಡಿಸುವ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ಅವರು ಸುಪ್ರೀಂ ಕೋರ್ಟ್‌ ಅನ್ನು ಕೋರಿದ್ದಾರೆ.

‘ಗುಣಮಟ್ಟ ಕುರಿತು ಪ್ರಮಾಣೀಕರಣವಿದೆ’

ಚೆನ್ನೈ: ‘ತಮ್ಮ ಡೇರಿ ಉತ್ಪನ್ನ ಮಾದರಿಗಳ ಗುಣಮಟ್ಟ ಕುರಿತು ಸಂಬಂಧಿಸಿದ ಪ್ರಾಧಿಕಾರಗಳು ಪ್ರಮಾಣೀಕರಣ ನೀಡಿವೆ’ ಎಂದು ತಿರುಪತಿ ದೇವಾಲಯಕ್ಕೆ ತುಪ್ಪ ಪೂರೈಸುವ ಎ.ಆರ್‌.ಡೇರಿ ಕಂಪನಿ ಶುಕ್ರವಾರ ತಿಳಿಸಿದೆ. ಜೂನ್‌ ಮತ್ತು ಜುಲೈ ತಿಂಗಳಿನಲ್ಲಿ ಮಾತ್ರ ತಿರುಮಲ ವೆಂಕಟೇಶ್ವರಸ್ವಾಮಿ ದೇಗುಲಕ್ಕೆ ತುಪ್ಪವನ್ನು ಪೂರೈಸಿರುವುದಾಗಿ ದಿಂಡಿಗಲ್‌ ಮೂಲದ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.