ADVERTISEMENT

ಮೋದಿ ಅವರ ಲಾಹೋರ್‌ ಭೇಟಿ ಅನಗತ್ಯವಾಗಿತ್ತು: ಪ್ರಣವ್ ಆತ್ಮಚರಿತ್ರೆಯಲ್ಲಿ ಉಲ್ಲೇಖ

ಮಾಜಿ ರಾಷ್ಟ್ರಪತಿ ಪ್ರಣವ್ ಆತ್ಮಚರಿತ್ರೆಯಲ್ಲಿ ಉಲ್ಲೇಖ

​ಪ್ರಜಾವಾಣಿ ವಾರ್ತೆ
Published 5 ಜನವರಿ 2021, 12:48 IST
Last Updated 5 ಜನವರಿ 2021, 12:48 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ    

ನವದೆಹಲಿ: 2015ರ ಕ್ರಿಸ್‌ಮಸ್‌ ದಿನ ಪ್ರಧಾನಿ ನರೇಂದ್ರ ಮೋದಿ ಅವರು ಲಾಹೋರ್‌ಗೆ ದಿಢೀರ್‌ ಭೇಟಿ ನೀಡಿ, ಪಾಕಿಸ್ತಾನದ ಆಗಿನ ಪ್ರಧಾನಿ ನವಾಜ್‌ ಶರೀಫ್‌ ಅವರಿಗೆ ಜನ್ಮದಿನದ ಶುಭಾಶಯ ಹೇಳುವ ಅಗತ್ಯ ಇರಲಿಲ್ಲ ಎಂಬುದು ಮಾಜಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರ ಅಭಿಪ್ರಾಯವಾಗಿತ್ತು.

ಮಂಗಳವಾರ ಬಿಡುಗಡೆಯಾದ ಅವರ ಅತ್ಮಚರಿತ್ರೆ ‘ದಿ ಪ್ರೆಸಿಡೆನ್ಷಿಯಲ್ ಇಯರ್ಸ್‌: 2012–2017’ನ ನಾಲ್ಕನೇ ಸಂಪುಟದಲ್ಲಿ ಅವರು ಈ ವಿಷಯ ಕುರಿತು ಬರೆದಿದ್ದಾರೆ.

‘ಪಾಕಿಸ್ತಾನ ಹಾಗೂ ಭಾರತ ನಡುವಿನ ಸಂಬಂಧಗಳ ಹಿನ್ನೆಲೆಯಲ್ಲಿ ಅವಲೋಕಿಸಿದಾಗ ಪ್ರಧಾನಿ ಮೋದಿ ಅವರ ಈ ನಡೆ ಅನಗತ್ಯವಾಗಿತ್ತು. ಅವರಿಗೆ ವಿದೇಶಾಂಗ ನೀತಿ ಬಗ್ಗೆ ಅರಿವಿರಲಿಲ್ಲ. ಇದು, ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರೊಂದಿಗೆ ಸಭೆ ನಡೆಸಿದಾಗಲೂ ಸಾಬೀತಾಗಿತ್ತು. ಹೀಗಾಗಿ ಅನಿರೀಕ್ಷಿತವಾದ ನಡೆಯನ್ನು ಮೋದಿಯಿಂದ ಮಾತ್ರ ನಿರೀಕ್ಷಿಸಲು ಸಾಧ್ಯ’ ಎಂದು ಅವರು ಉಲ್ಲೇಖಿಸಿದ್ದಾರೆ.

ADVERTISEMENT

ಮುಖರ್ಜಿ ಅವರು ಕಳೆದ ವರ್ಷ ಆಗಸ್ಟ್‌ 31ರಂದು ಸಾವನ್ನಪ್ಪಿದರು. ಅದಕ್ಕೂ ಮುನ್ನವೇ ಅವರು ತಮ್ಮ ಆತ್ಮಚರಿತ್ರೆಯ ನಾಲ್ಕನೇ ಸಂಪುಟದ ಕರಡನ್ನು ಅಂತಿಮಗೊಳಿಸಿದ್ದರು. ದೇಶದ ರಾಜಕಾರಣದ ವಿವಿಧ ಮಗ್ಗಲುಗಳ ಮೇಲೆ ಅವರು ಈ ಕೃತಿಯಲ್ಲಿ ಬೆಳಕು ಚೆಲ್ಲಿದ್ದಾರೆ.

ಅದೇ ರೀತಿ, ನೋಟು ರದ್ದತಿ ಮಾಡಿ ನಾಲ್ಕು ವರ್ಷಗಳು ಗತಿಸಿದ್ದರೂ, ಅದರ ಉದ್ದೇಶಗಳು ಇನ್ನೂ ಈಡೇರಿಲ್ಲ ಎಂದಿದ್ಧಾರೆ.

2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಹೀನಾಯ ಸೋಲು ಕಂಡಿದ್ದರ ಬಗ್ಗೆಯೂ ಮುಖರ್ಜಿ ಬರೆದಿದ್ದಾರೆ.

‘ನಾನು ಸಕ್ರಿಯ ರಾಜಕಾರಣದಲ್ಲಿ ಇದ್ದಿದ್ದರೆ 2014ರಲ್ಲಿ ಕಾಂಗ್ರೆಸ್‌ ಪಕ್ಷ 44 ಸ್ಥಾನಗಳಿಗೆ ಕುಸಿಯಲು ಬಿಡುತ್ತಿರಲಿಲ್ಲ. ಜನರ ಆಶೋತ್ತರಗಳಿಗೆ ಸ್ಪಂದಿಸುವಲ್ಲಿ ಪಕ್ಷ ಎಡವಿದ್ದೇ ಸೋಲಿಗೆ ಕಾರಣ’ ಎಂದು ವಿಶ್ಲೇಷಿಸಿದ್ದಾರೆ.

ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ ನಂತರ ನಡೆದ ಚುನಾವಣೆಯಲ್ಲಿಯೇ ಕಾಂಗ್ರೆಸ್‌ 154 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಹೀಗಾಗಿ, 2014ರಲ್ಲಿ ಪಕ್ಷ ಕಳಪೆ ಸಾಧನೆ ಮಾಡುತ್ತದೆ ಎಂದು ತಾವು ನಿರೀಕ್ಷಿಸಿರಲಿಲ್ಲ ಎಂದೂ ಮುಖರ್ಜಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.