ನವದೆಹಲಿ : 2021ರಲ್ಲಿ ನಡೆದಿದ್ದ ಲಖೀಂಪುರ ಖೀರಿ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿ ಆಶಿಶ್ ಮಿಶ್ರಾಗೆ ಸುಪ್ರೀಂ ಕೋರ್ಟ್ ಬುಧವಾರ ಎಂಟು ವಾರಗಳವರೆಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
‘ಜಾಮೀನು ಅವಧಿಯಲ್ಲಿ ಆರೋಪಿಯು ಉತ್ತರಪ್ರದೇಶ ಅಥವಾ ದೆಹಲಿಯಲ್ಲಿ ಉಳಿದುಕೊಳ್ಳುವಂತಿಲ್ಲ’ ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೆ.ಕೆ.ಮಾಹೇಶ್ವರಿ ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯಪೀಠವು ತೀರ್ಪಿನಲ್ಲಿ ತಿಳಿಸಿದೆ.
‘ಆರೋಪಿಯು ತನ್ನ ಪಾಸ್‌ಪೋರ್ಟ್ ಅನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ಒಪ್ಪಿಸಬೇಕು. ವಿಚಾರಣೆ ಪ್ರಕ್ರಿಯೆಗೆ ಹಾಜರಾಗುವ ಸಲುವಾಗಿ ಮಾತ್ರ ಉತ್ತರಪ್ರದೇಶಕ್ಕೆ ಭೇಟಿ ನೀಡಬಹುದು. ಆರೋಪಿ, ಆತನ ಪೋಷಕರು ಅಥವಾ ಬೆಂಬಲಿಗರು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸಾಕ್ಷ್ಯಗಳ ಮೇಲೆ ಪ್ರಭಾವ ಬೀರಲು ಮುಂದಾಗಿದ್ದೇ ಆದಲ್ಲಿ ಮಧ್ಯಂತರ ಜಾಮೀನು ರದ್ದುಪಡಿಸಲಾಗುತ್ತದೆ’ ಎಂದು ನ್ಯಾಯಪೀಠ ಹೇಳಿದೆ.
‘ಮಧ್ಯಂತರ ಜಾಮೀನು ಅವಧಿಯಲ್ಲಿ ತಾನು ಎಲ್ಲಿ ವಾಸವಿರುತ್ತೇನೆ ಎಂಬುದರ ಕುರಿತು ಆರೋಪಿಯು ವಿಚಾರಣಾಧೀನ ನ್ಯಾಯಾಲಯ ಹಾಗೂ ಆ ವ್ಯಾಪ್ತಿಯ ಪೊಲೀಸ್ ಠಾಣೆಗೆ ಮಾಹಿತಿ ಒದಗಿಸಬೇಕು. ವಾರಕ್ಕೊಮ್ಮೆ ಪೊಲೀಸ್ ಠಾಣೆಗೆ ಹಾಜರಾಗಬೇಕು’ ಎಂದು ಸೂಚಿಸಿದೆ.
ಈ ಕುರಿತ ವಿಚಾರಣೆಯನ್ನು ನ್ಯಾಯಾಲಯವು ಮಾರ್ಚ್ 14ಕ್ಕೆ ಮುಂದೂಡಿದೆ. ಆರೋಪಿ ಆಶಿಶ್, ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಮಗ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.