ADVERTISEMENT

ಲಖಿಂಪುರ ಹಿಂಸಾಚಾರ: ಕೇಂದ್ರ ಸಚಿವ ಅಜಯ್‌ ಮಿಶ್ರಾ ಮಗ ಆಶಿಶ್‌ ಮಿಶ್ರಾ ಬಂಧನ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2021, 1:24 IST
Last Updated 10 ಅಕ್ಟೋಬರ್ 2021, 1:24 IST
ಆಶಿಶ್‌ ಮಿಶ್ರಾ
ಆಶಿಶ್‌ ಮಿಶ್ರಾ   

ಲಖಿಂಪುರ ಖೇರಿ: ಉತ್ತರ ಪ್ರದೇಶದ ಲಖಿಂಪುರ್ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್‌ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅವರನ್ನು ವಿಶೇಷ ತನಿಖಾ ತಂಡ ಶನಿವಾರ ತಡರಾತ್ರಿ ಬಂಧಿಸಿದೆ.

ಬಂಧನಕ್ಕೂ ಮೊದಲು ಅಶಿಶ್‌ ಶನಿವಾರ ಬೆಳಗ್ಗೆ ವಿಚಾರಣೆಗೆ ಹಾಜರಾಗಿದ್ದರು. ಹನ್ನೊಂದು ಗಂಟೆಗಳ ಕಾಲ ನಡೆದ ದೀರ್ಘ ವಿಚಾರಣೆ ನಂತರ ತನಿಖಾ ತಂಡವು ಅವರನ್ನು ರಾತ್ರಿ ಬಂಧಿಸಿತು.

ಕೃತ್ಯ ನಡೆದ 6 ದಿನಗಳ ಬಳಿಕ ಆಶಿಶ್‌ ಮಿಶ್ರಾ ಅವರನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಆಶಿಶ್‌ ಸಹಕರಿಸಲಿಲ್ಲ. ಕೆಲವು ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದರು. ಅಸಹಕಾರ ಮತ್ತು ಹಾರಿಕೆಯ ಉತ್ತರ ನೀಡಿದ ಕಾರಣ ಆಶಿಶ್‌ ಅವರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಮತ್ತು ಬಂಧಿಸಲಾಗಿದೆ. ಕಸ್ಟಡಿ ವಿಚಾರಣೆ ಬಳಿಕ ಆಶಿಶ್‌ ಮಿಶ್ರಾ ಅವರನ್ನು ಕೋರ್ಟ್‌ಗೆ ಹಾಜರು ಪಡಿಸಲಾಗುವುದು ಎಂದು ಡಿಐಜಿ ಉಪೇಂದ್ರ ಅಗರ್ವಾಲ್‌ ತಿಳಿಸಿದ್ದಾರೆ.

ADVERTISEMENT

ಅಕ್ಟೋಬರ್‌ 8ಕ್ಕೆ ಆಶಿಶ್‌ ಮಿಶ್ರಾಗೆ ಎಸ್‌ಐಟಿ ಮುಂದೆ ಹಾಜರಾಗಲು ಸಮನ್ಸ್‌ ನೀಡಲಾಗಿತ್ತು. ಗೈರಾದ ಕಾರಣ 2ನೇ ಸಮನ್ಸ್‌ ಜಾರಿ ಮಾಡಲಾಗಿತ್ತು. ಲಖಿಂಪುರದ ಅಪರಾಧ ವಿಭಾಗದ ಕಚೇರಿಗೆ ಅಕ್ಟೋಬರ್‌ 9 ರಂದು ಬೆಳಗ್ಗೆ ಆಶಿಶ್‌ ಮಿಶ್ರಾ ಹಾಜರಾಗಿದ್ದರು.

ಪ್ರಕರಣಕ್ಕೆ ಸಂಬಂಧಿಸಿ ಅಕ್ಟೋಬರ್‌ 7ರಂದು ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಆಶಿಶ್‌ ಮಿಶ್ರಾ ಸೇರಿ ಇದುವರೆಗೆ 3 ಮಂದಿಯನ್ನು ಬಂಧಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.