ADVERTISEMENT

ಲಖೀಂಪುರ ಖೇರಿ ಹಿಂಸಾಚಾರ ಪ್ರಕರಣ: ಆಶಿಶ್‌ ಮಿಶ್ರಾಗೆ ಸುಪ್ರೀಂ ಕೋರ್ಟ್‌ ಜಾಮೀನು

ಪಿಟಿಐ
Published 22 ಜುಲೈ 2024, 9:32 IST
Last Updated 22 ಜುಲೈ 2024, 9:32 IST
ಆಶಿಶ್‌ ಮಿಶ್ರಾ
ಆಶಿಶ್‌ ಮಿಶ್ರಾ   

ನವದೆಹಲಿ: ಎಂಟು ಜನರ ಸಾವಿಗೆ ಕಾರಣವಾಗಿದ್ದ ಲಖೀಂಪುರ ಖೇರಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವ ಅಜಯ್‌ ಕುಮಾರ್‌ ಮಿಶ್ರಾ ಅವರ ಪುತ್ರ ಆಶಿಶ್‌ ಮಿಶ್ರಾಗೆ ಸುಪ್ರೀಂ ಕೋರ್ಟ್‌ ಇಂದು (ಸೋಮವಾರ) ಜಾಮೀನು ಮಂಜೂರು ಮಾಡಿದೆ.

ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಉಜ್ಜಲ್ ಭುಯಾನ್ ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯಪೀಠವು ಅರ್ಜಿ ವಿಚಾರಣೆ ನಡೆಸಿ ಆದೇಶ ಹೊರಡಿಸಿದೆ. ದೆಹಲಿ ಮತ್ತು ಲಖನೌಗೆ ಪ್ರವೇಶಿಸದಂತೆ ಆಶಿಶ್‌ ಮಿಶ್ರಾಗೆ ನಿರ್ಬಂಧ ವಿಧಿಸಲಾಗಿದೆ. ಜತೆಗೆ ಪ್ರಕರಣದ ವಿಚಾರಣೆಯನ್ನು ತ್ವರಿತಗೊಳಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ಸೂಚಿಸಿದೆ.

ವಿಚಾರಣೆಗೆ ಹಾಜರಾಗುವ ಎಲ್ಲ ಸಾಧ್ಯತೆಗಳನ್ನು ಪರಿಗಣಿಸಿ ಆರೋಪಿಗೆ ಜಾಮೀನಿ ಮಂಜೂರು ಮಾಡಲಾಗಿದೆ. 117 ಸಾಕ್ಷಿಗಳ ಪೈಕಿ ಏಳು ಮಂದಿಯನ್ನು ಮಾತ್ರ ಇದುವರೆಗೆ ವಿಚಾರಣೆಗೆ ಒಳಪಡಿಸಲಾಗಿದೆ. ಉಳಿದ ಸಾಕ್ಷಿಗಳ ಹೇಳಿಕೆ ದಾಖಲಿಸುವ ಮೂಲಕ ವಿಚಾರಣೆಯನ್ನು ತ್ವರಿತಗೊಳಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸಲಾಗಿದೆ ಎಂದು ನ್ಯಾಯಪೀಠ ಹೇಳಿದೆ.

ADVERTISEMENT

2023ರ ಸೆ.26ರಂದು ಮಿಶ್ರಾಗೆ ನೀಡಿದ್ದ ಮಧ್ಯಂತರ ಜಾಮೀನಿನಲ್ಲಿನ ಷರತ್ತುಗಳನ್ನು ಸಡಿಲಗೊಳಿಸಿದ್ದ ಸುಪ್ರೀಂ ಕೋರ್ಟ್‌, ಅನಾರೋಗ್ಯಕ್ಕೀಡಾಗಿದ್ದ ತಾಯಿಯನ್ನು ನೋಡಿಕೊಳ್ಳಲು ಹಾಗೂ ಪುತ್ರಿಗೆ ಚಿಕಿತ್ಸೆ ಕೊಡಿಸುವುದಕ್ಕಾಗಿ ದೆಹಲಿಗೆ ಭೇಟಿ ನೀಡಲು ಆಶಿಶ್‌ಗೆ ಅನುವು ಮಾಡಿಕೊಟ್ಟಿತ್ತು. ಜತೆಗೆ ಮಧ್ಯಂತರ ಜಾಮೀನಿನ ಅವಧಿಯನ್ನು ಸುಪ್ರೀಂ ಕೋರ್ಟ್ ವಿಸ್ತರಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.