ಕೊಚ್ಚಿ: ಲಕ್ಷದ್ವೀಪದ ಆಡಳಿತಾಧಿಕಾರಿ ಪ್ರಫುಲ್ ಕೆ. ಪಟೇಲ್ ಅವರು ಈಚೆಗೆ ಜಾರಿ ಮಾಡಿರುವ ನೀತಿಗಳಿಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಆಡಳಿತಾಧಿಕಾರಿಯನ್ನು ವಾಪಸ್ ಕರೆಯಿಸಿಕೊಳ್ಳಬೇಕು ಮತ್ತು ಹೊಸ ನೀತಿಗಳನ್ನು ರದ್ದುಪಡಿಸಬೇಕು ಎಂದು ಕಾಂಗ್ರೆಸ್, ಸಿಪಿಎಂ ಸೇರಿದಂತೆ ಎಲ್ಲಾ ವಿರೋಧಪಕ್ಷಗಳು ಒತ್ತಾಯಿಸಿವೆ.
‘ಲಕ್ಷದ್ವೀಪದ ಜನರ ಜೀವನ, ಸಂಸ್ಕೃತಿಯ ಮೇಲೆ ನಿರ್ಬಂಧಗಳನ್ನು ಹೇರುವುದನ್ನು ಒಪ್ಪಲಾಗದು. ಕೇರಳವು ಲಕ್ಷದ್ವೀಪದ ಜತೆಗೆ ಅವಿನಾ ಭಾವ ಸಂಬಂಧ ಹೊಂದಿದೆ. ಇದನ್ನು ಹಾಳು ಮಾಡುವ ಪ್ರಯತ್ನಗಳು ನಡೆಯುತ್ತಿದೆ. ಇದು ಖಂಡನೀಯ’ ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಟ್ವೀಟ್ ಮಾಡಿದ್ದಾರೆ.
‘ಪಟೇಲ್ ಅವರು ಜಾರಿಮಾಡಿರುವ ನೀತಿಗಳು ಜನವಿರೋಧಿ ಮತ್ತು ಸರ್ವಾಧಿಕಾರಿ ಮನೋಭಾವದವು ಗಳು. ಕೇಂದ್ರ ಸರ್ಕಾರವು ತನ್ನ ಹಿಂದುತ್ವ ಕಾರ್ಯಸೂಚಿಯನ್ನು ಜಾರಿ ಮಾಡಲು ರಾಜ್ಯಪಾಲರೂ ಸೇರಿದಂತೆ ಸಾಂವಿಧಾನಿಕ ಹುದ್ದೆಗಳ ದುರು ಪಯೋಗ ಮಾಡುತ್ತಿದೆ’ ಎಂದು ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ. ರಾಜಾ ಆರೋಪಿಸಿದ್ದಾರೆ.
ಪಟೇಲ್ ಅವರ ನೀತಿಗಳನ್ನು ಕಾಂಗ್ರೆಸ್ ಪಕ್ಷವೂ ತೀವ್ರವಾಗಿ ವಿರೋಧಿ ಸಿದೆ. ‘ಆಡಳಿತಾಧಿಕಾರಿಯು ದ್ವೀಪದ ಶಾಂತಿ ಮತ್ತು ಸಂಸ್ಕೃತಿಯನ್ನು ನಾಶಪಡಿಸುತ್ತಿರುವುದು ಮಾತ್ರವಲ್ಲದೆ, ಏಕಪಕ್ಷೀಯ ನಿರ್ಬಂಧಗಳನ್ನು ವಿಧಿ ಸುವ ಮೂಲಕ ಜನರಿಗೆ ಕಿರುಕುಳ ನೀಡುತ್ತಿದ್ದಾರೆ’ ಎಂದು ಕಾಂಗ್ರೆಸ್‌ನ ಕಾರ್ಯದರ್ಶಿ ಹಾಗೂ ವಕ್ತಾರ ಅಜಯ್ ಮಾಕನ್ ಹೇಳಿದ್ದಾರೆ.
‘ದ್ವೀಪ ಸಮೂಹದಲ್ಲಿ ಆಡಳಿತದ ದುರುಪಯೋಗವನ್ನು ತಪ್ಪಿಸಬೇಕು, ಆಡಳಿತಾಧಿಕಾರಿ ಪಟೇಲ್ ಅವರನ್ನು ಹಿಂದಕ್ಕೆ ಕರೆಯಿಸಿಕೊಳ್ಳ ಬೇಕು’ ಎಂದು ಒತ್ತಾಯಿಸಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಸಿಪಿಐ ಪತ್ರ ಬರೆದಿದೆ. ಸಿಪಿಎಂ ಸಂಸದ ಎಳಮರಂ ಕರೀಮ್, ಕಾಂಗ್ರೆಸ್ ಮುಖಂಡರಾದ ರಮೇಶ್ ಚೆನ್ನಿತ್ತಲ, ಕೆ.ಸಿ. ವೇಣು ಗೋಪಾಲ್ ಮುಂತಾದವರೂ ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ.
ಅಭಿಯಾನ ಆರಂಭ: ಪಟೇಲ್ ಅವರು ಹೊಸ ನೀತಿಗಳನ್ನು ಜಾರಿ ಮಾಡುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ‘ಸೇವ್ ಲಕ್ಷ ದ್ವೀಪ್’ ಎಂಬ ಅಭಿಯಾನ ಆರಂಭವಾಗಿದೆ. ‘ಈಕೂಡಲೇ ಕಾರ್ಯ ಪ್ರವೃತ್ತರಾಗದಿದ್ದರೆ ಪರಿಸ್ಥಿತಿ ನಮ್ಮ ಕೈಮೀರುವುದು’ ಎಂದು ಅನೇಕರು ಆತಂಕ ವ್ಯಕ್ತಪಡಿಸಿದ್ದಾರೆ.
ಈನಡುವೆ, ನ್ಯಾಯಾಲಯಕ್ಕೆ ಹಾಜರಾಗುವ ಬದಲು, ವಿವಿಧ ಸರ್ಕಾರಿ ಕಚೇರಿಗಳಲ್ಲಿ ಬಾಕಿ ಉಳಿದಿರುವ ಕಾನೂನು ಕೆಲಸಗಳಿಗೆ ಆದ್ಯತೆ ನೀಡುವಂತೆ ಸಹಾಯಕ ಪಬ್ಲಿಕ್ ಪ್ಯಾಸಿಕ್ಯೂಟರ್ ಅವರಿಗೆ ಆಡಳಿತವು ನೀಡಿದ ಆದೇಶಕ್ಕೆ ಕೇರಳ ಹೈಕೋರ್ಟ್ ಮಂಗಳವಾರ ತಡೆಯಾಜ್ಞೆ ನೀಡಿದೆ. ಲಕ್ಷದ್ವೀಪದ ಮೊಹಮ್ಮದ್ ಸಲೀಮ್ ಎಂಬುವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿದೆ.
ವಿವಾದ ಯಾಕೆ?
ಮುಸ್ಲಿಂ ಸಮುದಾಯವೇ ಹೆಚ್ಚಾಗಿರುವ ಈ ದ್ವೀಪ ಸಮೂಹದಲ್ಲಿ ಪಟೇಲ್ ಅವರು ಕೆಲವು ಹೊಸ ನೀತಿಗಳನ್ನು ಜಾರಿ ಮಾಡಿದರು. ಅವುಗಳಲ್ಲಿ ಭಾರಿ ವಿವಾದಕ್ಕೆ ಕಾರಣವಾದವುಗಳೆಂದರೆ...
*ಅಭಿವೃದ್ಧಿ ಯೋಜನೆಗಳಿಗಾಗಿ ಖಾಸಗಿಯವರಿಂದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ನಿಯಮ
* ಸಮಾಜವಿರೋಧಿ ಚಟುವಟಿಕೆ ತಡೆ (ಪಿಎಎಸ್‌ಎ) ಕಾಯ್ದೆ ಜಾರಿಮಾಡಿದ್ದು
* ಲಕ್ಷದ್ವೀಪ ಅಭಿವೃದ್ಧಿ ನಿಯಂತ್ರಣ ಪ್ರಾಧಿಕಾರ –2021 ರಚನೆ
* ಲಕ್ಷದ್ವೀಪದಲ್ಲಿ ಮದ್ಯ ಮಾರಾಟಕ್ಕೆ ಇದ್ದ ನಿಷೇಧವನ್ನು ತೆರವುಗೊಳಿಸಿದ್ದು
* ಗೋಮಾಂಸದ ಉತ್ಪನ್ನಗಳ ಮೇಲೆ ನಿಷೇಧ
* ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದಲ್ಲಿ ಮಾಂಸಾಹಾರ ನಿಷೇಧ
* ಕರಾವಳಿಯಲ್ಲಿ ಮೀನುಗಾರರು ನಿರ್ಮಿಸಿದ್ದ ಶೆಡ್‌ಗಳ ತೆರವು
* ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸುವವರು ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರಬಾರದು ಎಂಬ ನಿಯಮ
ರಾಜಕೀಯ ಹಿನ್ನೆಲೆ
ಲಕ್ಷದ್ವೀಪದ ಆಡಳಿತಾಧಿಕಾರಿ ಯಾಗಿದ್ದ ದಿನೇಶ್ವರ ಶರ್ಮಾ ಅವರ ನಿಧನಾನಂತರ, ಕಳೆದ ಡಿಸೆಂಬರ್‌ನಲ್ಲಿ ದಾದ್ರಾ ಮತ್ತು ನಗರ್‌ಹವೇಲಿ ಹಾಗೂ ದಿಯು–ದಾಮನ್‌ನ ಆಡಳಿತಾಧಿಕಾರಿಯಾಗಿದ್ದ ಪ್ರಫುಲ್ ಪಟೇಲ್ ಅವರಿಗೆ ಲಕ್ಷದ್ವೀಪದ ಹೊಣೆಗಾರಿಕೆಯನ್ನೂ ನೀಡಲಾಗಿತ್ತು.
ಗುಜರಾತ್ ಮೂಲದವರಾದ ಪಟೇಲ್, ಅಲ್ಲಿ ಹಿಂದೆ ಗೃಹಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ರಾಜಕೀಯ ಹಿನ್ನೆಲೆಯ ವ್ಯಕ್ತಿಯನ್ನು ಈ ಹುದ್ದೆಗೆ ನೇಮಿಸಿದ್ದೇ ವಿವಾದಕ್ಕೆ ಕಾರಣವಾಗಿದೆ.
‘ಸಾಮಾನ್ಯವಾಗಿ ಅಧಿಕಾರಿಗಳು ಅಥವಾ ನಿವೃತ್ತ ಅಧಿಕಾರಿಗಳನ್ನು ಲಕ್ಷದ್ವೀಪದ ಆಡಳಿತಾಧಿಕಾರಿಯಾಗಿ ನೇಮಕ ಮಾಡಲಾಗುತ್ತದೆ. ಆದರೆ, ಇದೇ ಮೊದಲಬಾರಿಗೆ ರಾಜಕಾರಣಿಯೊಬ್ಬರನ್ನು ಈ ಹುದ್ದೆಗೆ ನೇಮಕ ಮಾಡಲಾಗಿದೆ. ಗೃಹಸಚಿವ ಅಮಿತ್ ಶಾ ಅವರೇ ನೇರವಾಗಿ ಈ ನೇಮಕ ಮಾಡಿದ್ದಾರೆ’ ಎಂದು ಅಜಯ್ ಮಾಕನ್ ಆರೋಪಿಸಿದ್ದರೆ.
ಸಮರ್ಥಿಸಿಕೊಂಡ ಬಿಜೆಪಿ
ಆಡಳಿತಾಧಿಕಾರಿ ಪಟೇಲ್ ಅವರ ಕ್ರಮವನ್ನು ಬಿಜೆಪಿಯ ಲಕ್ಷದ್ವೀಪ ಘಟಕವು ಸಮರ್ಥಿಸಿಕೊಂಡಿದೆ. ‘ಕೇಂದ್ರ ಸರ್ಕಾರವನ್ನು ವಿರೋಧಿಸುವ ನೀತಿಯ ಭಾಗವಾಗಿ ವಿರೋಧಪಕ್ಷಗಳು ಪಟೇಲ್ ವಿರುದ್ಧ ಸುಳ್ಳು ಪ್ರಚಾರಾಂದೋಲನ ನಡೆಸುತ್ತಿವೆ’ ಎಂದು ಘಟಕ ಹೇಳಿದೆ.
‘ಲಕ್ಷದ್ವೀಪದ ವಿಚಾರದಲ್ಲೂ ‘ಟೂಲ್‌ಕಿಟ್’ ಅಭಿಯಾನವನ್ನು ವಿರೋಧ ಪಕ್ಷಗಳು ಆರಂಭಿಸಿವೆ’ ಎಂದು ಬಿಜೆಪಿ ಕೇರಳ ಘಟಕದ ಅಧ್ಯಕ್ಷ ಸುರೇಂದ್ರನ್ ಆರೋಪಿಸಿದ್ದಾರೆ.
ಆದರೆ, ಪಕ್ಷದ ಕೆಲವು ಹಿರಿಯ ಮುಖಂಡರು ಪಟೇಲ್ ಅವರ ಕ್ರಮ ಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ದ್ದಾರೆ. ‘ಅಭಿವೃದ್ಧಿ ಯೋಜನೆಗಳನ್ನು ನಾವು ವಿರೋಧಿಸುವುದಿಲ್ಲ. ಆದರೆ ಜನರ ಮನಸ್ಸನ್ನು ಗೆದ್ದ ನಂತರವೇ ಅವುಗಳನ್ನು ಜಾರಿಮಾಡಬೇಕು ಎಂದು ಬಯಸುತ್ತೇವೆ’ ಎಂದು ಬಿಜೆಪಿ ಲಕ್ಷದ್ವೀಪ ಘಟಕದ ಮುಖ್ಯಸ್ಥ ಎಚ್.ಕೆ. ಮೊಹಮ್ಮದ್ ಕಾಸಿಂ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.