ಪಟ್ನಾ:'ನಿತೀಶ್ ಕುಮಾರ್ ಅವರ ಸರ್ಕಾರವನ್ನು ಉರುಳಿಸಲು ಮತ್ತು ರಾಜ್ಯದಲ್ಲಿ ಆರ್‌ಜೆಡಿಯನ್ನು ನೇತೃತ್ವದ ಮಹಾಘಟಬಂಧನವನ್ನು ಅಧಿಕಾರಕ್ಕೆ ತರುವ ಉದ್ದೇಶದಿಂದ ಲಾಲು ಪ್ರಸಾದ್ ಬಿಹಾರದ ಎನ್‌ಡಿಎ ಶಾಸಕರನ್ನು ತಮ್ಮತ್ತ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ' ಎಂದು ಬಿಜೆಪಿಯ ಹಿರಿಯ ಮುಖಂಡ ಸುಶೀಲ್ ಕುಮಾರ್ ಮೋದಿ ಮಂಗಳವಾರ ಆರೋಪಿಸಿದ್ದಾರೆ.
ಮೇವು ಹಗರಣ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯದಿಂದ ಶಿಕ್ಷೆಗೊಳಗಾಗಿರುವ 72 ವರ್ಷ ವಯಸ್ಸಿನ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಸದ್ಯ ರಾಂಚಿಯಲ್ಲಿದ್ದಾರೆ. ಆರಂಭದಲ್ಲಿ ಹಾಟ್ವಾರ್ ಸೆಂಟ್ರಲ್ ಜೈಲಿನಲ್ಲಿದ್ದ ಅವರನ್ನು ಆರೋಗ್ಯ ಸಮಸ್ಯೆಯಿಂದಾಗಿ ರಾಂಚಿಯಲ್ಲಿರುವ ರಾಜೇಂದ್ರ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ರಿಮ್ಸ್) ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
'ಲಾಲು ಪ್ರಸಾದ್ ಅವರು ರಾಂಚಿಯಿಂದ ಎನ್‌ಡಿಎ ಶಾಸಕರಿಗೆ ದೂರವಾಣಿ ಕರೆ ಮಾಡಿದ್ದಾರೆ (8051216302) ಮತ್ತು ಮಂತ್ರಿ ಸ್ಥಾನಗಳ ಭರವಸೆ ನೀಡುತ್ತಿದ್ದಾರೆ' ಎಂದು ಟ್ವೀಟ್ ಮಾಡಿರುವ ಮೋದಿ, ಹಲವಾರು ಮಾಧ್ಯಮಗಳನ್ನು ಟ್ಯಾಗ್ ಮಾಡಿದ್ದಾರೆ.
ಅದೇ ಸಂಖ್ಯೆಗೆ ನಾನು ಕರೆ ಮಾಡಿದಾಗ ಲಾಲು ನೇರವಾಗಿ ಕರೆ ಸ್ವೀಕರಿಸಿದರು. ಜೈಲಿನಿಂದ ಈ ಕೊಳಕು ತಂತ್ರಗಳನ್ನು ಮಾಡಬೇಡಿ, ನೀವು ಯಶಸ್ವಿಯಾಗುವುದಿಲ್ಲ ಎಂದು ನಾನು ಹೇಳಿದೆ ಎಂದಿದ್ದಾರೆ.
ಇತ್ತೀಚೆಗೆ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆರ್‌ಜೆಡಿ 75 ಸ್ಥಾನಗಳೊಂದಿಗೆ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ ಸರ್ಕಾರ ರಚಿಸಲು ಅಗತ್ಯವಿದ್ದ ಮ್ಯಾಜಿಕ್ ನಂಬರ್ 122ರನ್ನು ತಲುಪಲು ಮಹಾಘಟಬಂಧನಕ್ಕೆ ಸಾಧ್ಯವಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.