ADVERTISEMENT

ಉದ್ಯೋಗಕ್ಕಾಗಿ ಭೂಮಿ ಹಗರಣ: ಲಾಲೂ ಪ್ರಸಾದ್, ರಾಬಡಿ ದೇವಿ, ತೇಜಸ್ವಿಗೆ ಜಾಮೀನು

ಪಿಟಿಐ
Published 4 ಅಕ್ಟೋಬರ್ 2023, 7:25 IST
Last Updated 4 ಅಕ್ಟೋಬರ್ 2023, 7:25 IST
<div class="paragraphs"><p>ತೇಜಸ್ವಿ ಯಾದವ್, ರಾಬಡಿ ದೇವಿ, ಲಾಲೂ ಪ್ರಸಾದ್</p></div>

ತೇಜಸ್ವಿ ಯಾದವ್, ರಾಬಡಿ ದೇವಿ, ಲಾಲೂ ಪ್ರಸಾದ್

   

ನವದೆಹಲಿ: ರೈಲ್ವೆ ಇಲಾಖೆಯ ಉದ್ಯೋಗಕ್ಕಾಗಿ ಭೂಮಿ ಹಗರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್, ಅವರ ಪತ್ನಿ ರಾಬಡಿ ದೇವಿ ಹಾಗೂ ಪುತ್ರ, ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್‌ ಅವರಿಗೆ ದೆಹಲಿ ನ್ಯಾಯಾಲಯ ಬುಧವಾರ ಜಾಮೀನು ಮಂಜೂರು ಮಾಡಿದೆ.

ಸಮನ್ಸ್‌ ಜಾರಿಯಾದ ಬೆನ್ನಲ್ಲೇ ಈ ಮೂವರು ಜಾಮೀನು ಮಂಜೂರು ಮಾಡುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ಇವರ ಕೋರಿಕೆಗೆ ಸಿಬಿಐ ಆಕ್ಷೇಪ ವ್ಯಕ್ತಪಡಿಸಲಿಲ್ಲ. ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶೆ ಗೀತಾಂಜಲಿ ಜಾಮೀನು ಮಂಜೂರು ಮಾಡಿದರು.

ADVERTISEMENT

ತನಿಖೆ ಹಂತದಲ್ಲಿ ಆರೋಪಿಗಳ ಬಂಧನವಾಗಿಲ್ಲ ಎಂದು ಹೇಳಿದ ನ್ಯಾಯಾಲಯ, ತಲಾ ₹ 50 ಸಾವಿರ ಬಾಂಡ್‌ ನೀಡುವಂತೆ ಸೂಚಿಸಿ ಜಾಮೀನು ಮಂಜೂರು ಮಾಡಿದೆ. ಜತೆಗೆ ಪ್ರಕರಣದ ಆರೋಪ ಪಟ್ಟಿಯನ್ನು ಹಾಗೂ ಸಂಬಂಧಿಸಿದ ಇತರ ದಾಖಲೆಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಸಿಬಿಐಗೆ ಸೂಚಿಸಿದೆ.

ಪ್ರಕರಣದ ಪ್ರಾಥಮಿಕ ವರದಿಯಲ್ಲಿ ಆರೋಪಿಗಳ ವಿರುದ್ಧ ಭ್ರಷ್ಟಾಚಾರ, ಕ್ರಿಮಿನಲ್ ಪಿತೂರಿ, ವಂಚನೆ ಹಾಗೂ ನಕಲಿ ದಾಖಲೆ ಸೃಷ್ಟಿಯಂತ ಆರೋಪಗಳ ಇದ್ದವು. ಇದನ್ನು ಆಧರಿಸಿ ಸೆ. 22ರಂದು ನ್ಯಾಯಾಲಯ ಸಮನ್ಸ್‌ ಜಾರಿಗೊಳಿಸಿತ್ತು. 

ಉದ್ಯೋಗಕ್ಕಾಗಿ ಭೂಮಿ ಹಾಗೂ ಮೇವು ಹಗರಣ ಎರಡರಲ್ಲೂ ಲಾಲೂ ಪ್ರಸಾದ್ ಅವರು ಸದ್ಯ ಜಾಮೀನು ಪಡೆದಿದ್ದಾರೆ. ಉದ್ಯೋಗಕ್ಕಾಗಿ ಭೂಮಿ ಪ್ರಕರಣದಲ್ಲಿ ಸಿಬಿಐ ಸಲ್ಲಿಸಿದ್ದ 2ನೇ ಆರೋಪ ಪಟ್ಟಿಯಲ್ಲಿ ತೇಜಸ್ವಿ ಯಾದವ್ ಅವರ ಹೆಸರನ್ನು ಸೇರಿಸಲಾಗಿದೆ.

2004ರಲ್ಲಿ ಲಾಲೂ ಪ್ರಸಾದ ಯಾದವ್ ಅವರು ರೈಲ್ವೆ ಮಂತ್ರಿಯಾಗಿದ್ದಾಗ ಪೂರ್ವ ಕೇಂದ್ರ ವಲಯದಲ್ಲಿ ಡಿ–ದರ್ಜೆ ನೌಕರಿ ಪಡೆದವರು ಕೆಲ ಜಮೀನುಗಳನ್ನು ಉಡುಗೊರೆ ರೂಪದಲ್ಲಿ ಆರ್‌ಜೆಡಿ ಮುಖ್ಯಸ್ಥರ ಕುಟುಂಬದವರಿಗೆ, ಅವರ ಸಂಬಂಧಿಕರಿಗೆ ವರ್ಗಾಯಿಸಿದ್ದರು ಎಂಬ ವಿಷಯವನ್ನು ಸಿಬಿಐ ಬೆನ್ನು ಹತ್ತಿದೆ ಎಂಬ ಮಾಹಿತಿಯನ್ನು ಅಧಿಕಾರಿಗಳು ನೀಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾಲೂ ಪ್ರಸಾದ್ ಯಾದವ್ ಹಾಗೂ ಅವರ ಪತ್ನಿ, ಇಬ್ಬರು ಪುತ್ರಿಯರು, ಕೆಲ ಸರ್ಕಾರಿ ನೌಕರರು ಹಾಗೂ ಖಾಸಗಿ ವ್ಯಕ್ತಿಗಳು ಸೇರಿ 15 ಜನರ ವಿರುದ್ಧ 2022ರ ಮೇ 18ರಂದು ಸಿಬಿಐ ಪ್ರಕರಣ ದಾಖಲಿಸಿತ್ತು. ಕಳೆದ ವರ್ಷ ಸಿಬಿಐ ಮೊದಲ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಇದು ಮುಂಬೈನಲ್ಲಿರುವ ರೈಲ್ವೆಯ ಕೇಂದ್ರ ವಲಯದಲ್ಲಿ ನಡೆದ ನೇಮಕಾತಿಗೆ ಸಂಬಂಧಿಸಿದ್ದಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.