ಪಟ್ನಾ: ಉದ್ಯೋಗಕ್ಕಾಗಿ ಭೂಮಿ ಹಗರಣಕ್ಕೆ ಸಂಬಂಧಿಸಿದಂತೆ ಶನಿವಾರ ವಿಚಾರಣೆಗೆ ಹಾಜರಾಗುವಂತೆ ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರಿಗೆ ಸಿಬಿಐ ಸಮನ್ಸ್ ನೀಡಿದೆ.
ಈ ಹಿಂದೆ ಮಾರ್ಚ್ 4 ರಂದು ಯಾದವ್ ಅವರನ್ನು ವಿಚಾರಣೆಗೆ ಕರೆಯಲಾಗಿತ್ತು. ಆದರೆ, ಅವರು ಸಿಬಿಐ ಅಧಿಕಾರಿಗಳ ಮುಂದೆ ಹಾಜರಾಗಿರಲಿಲ್ಲ. ಸದ್ಯ ಈಗ ಹೊಸ ದಿನಾಂಕ ನೀಡಲಾಗಿದೆ.
ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ತೇಜಸ್ವಿ ಅವರಿಗೆ ಶನಿವಾರ ಬೆಳಗ್ಗೆಯೇ ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿತ್ತು. ಆದರೆ ಅವರು ಇನ್ನೂ ಇಲ್ಲಿನ ಕೇಂದ್ರೀಯ ತನಿಖಾ ದಳದ (ಸಿಬಿಐ) ಪ್ರಧಾನ ಕಚೇರಿಗೆ ಆಗಮಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚೆಗೆ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಮತ್ತು ಅವರ ಪತ್ನಿ ರಾಬ್ರಿ ದೇವಿ ಅವರನ್ನು ಕ್ರಮವಾಗಿ ದೆಹಲಿ ಮತ್ತು ಪಟ್ನಾದಲ್ಲಿ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಪ್ರಶ್ನೆ ಮಾಡಿದೆ.
ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಕ್ಕೆ ಬದಲಾಗಿ ಭೂಮಿಯನ್ನು ಉಡುಗೊರೆಯಾಗಿ ಅಥವಾ ಅಗ್ಗದ ದರದಲ್ಲಿ ಪಡೆದ ಪ್ರಕರಣ ಇದಾಗಿದೆ.
ಹಗರಣಕ್ಕೆ ಸಂಬಂಧಿಸಿದಂತೆ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರ ಮೂವರು ಪುತ್ರಿಯರು ಹಾಗೂ ಆರ್‌ಜೆಡಿ ನಾಯಕರ ಸ್ಥಳಗಳು ಸೇರಿದಂತೆ ಅನೇಕ ಕಡೆಗಳಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದಾರೆ. ಲಾಲು ಪ್ರಸಾದ್ ಪುತ್ರಿಯರಾದ ರಾಗಿಣಿ ಯಾದವ್, ಚಂದಾ ಯಾದವ್ ಮತ್ತು ಹೇಮಾ ಯಾದವ್ ಮತ್ತು ಆರ್‌ಜೆಡಿಯ ಮಾಜಿ ಶಾಸಕ ಅಬು ದೋಜಾನ ಅವರಿಗೆ ಸೇರಿದ ಸ್ಥಳಗಳಲ್ಲಿ ಪರಿಶೀಲನೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ದಾಳಿಯ ವೇಳೆ ಒಟ್ಟು ₹53 ಲಕ್ಷ ಸಿಕ್ಕಿದೆ ಎಂದು ವರದಿಯಾಗಿದೆ.
ಇವುಗಳನ್ನೂ ಓದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.