ADVERTISEMENT

ತಾಜ್ ಮಹಲ್ ಜಾಗ ಜೈಪುರದ ಜೈ ಸಿಂಗ್‌ಗೆ ಸೇರಿತ್ತು: ಬಿಜೆಪಿ ಸಂಸದೆ ದಿಯಾ ಕುಮಾರಿ

ಪಿಟಿಐ
Published 11 ಮೇ 2022, 11:23 IST
Last Updated 11 ಮೇ 2022, 11:23 IST
ತಾಜ್‌ ಮಹಲ್‌ ಮತ್ತು ಸಂಸದೆ ದಿಯಾ ಕುಮಾರಿ
ತಾಜ್‌ ಮಹಲ್‌ ಮತ್ತು ಸಂಸದೆ ದಿಯಾ ಕುಮಾರಿ   

ಜೈಪುರ: ತಾಜ್‌ ಮಹಲ್‌ ನಿರ್ಮಿಸಲಾಗಿರುವ ಸ್ಥಳವು ಜೈಪುರದ ಮಹಾರಾಜ ಜೈ ಸಿಂಗ್‌ಗೆ ಸೇರಿದ್ದಾಗಿತ್ತು. ಅದನ್ನು ಮೊಘಲ್‌ ಚಕ್ರವರ್ತಿ ಶಾಹ್ ಜಹಾನ್‌ ಆಕ್ರಮಿಸಿಕೊಂಡರು ಎಂದು ಬಿಜೆಪಿ ಸಂಸದೆ ದಿಯಾ ಕುಮಾರಿ ಹೇಳಿದ್ದಾರೆ.

ಮಹಾರಾಜ ಜೈ ಸಿಂಗ್‌ಗೆ ಸೇರಿದ್ದ ಜಾಗ ಎಂಬುದಕ್ಕೆ ಜೈಪುರದ ಹಿಂದಿನ ರಾಜ ವಂಶಕ್ಕೆ ಸೇರಿದ ಕುಟುಂಬದ ಬಳಿ ದಾಖಲೆಗಳಿವೆ ಎಂದಿದ್ದಾರೆ.

ತಾಜ್‌ ಮಹಲ್‌ನ ಇತಿಹಾಸವನ್ನು ತಿಳಿಯಲು ಸತ್ಯಶೋಧನಾ ತನಿಖೆಗೆ ಆದೇಶಿಸಬೇಕು ಎಂದು ಕೋರಿ ಅಲಹಾಬಾದ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿರುವುದನ್ನು ದಿಯಾ ಕುಮಾರಿ ಬೆಂಬಲಿಸಿದ್ದಾರೆ. ಇತಿಹಾಸ ತಿಳಿಯಲು ಅಲ್ಲಿನ 22 ಕೊಠಡಿಗಳ ಬೀಗಮುದ್ರೆ ತೆರವುಗೊಳಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ADVERTISEMENT

'ಸ್ಮಾರಕ ನಿರ್ಮಾಣವಾಗುವುದಕ್ಕೂ ಮುನ್ನ ಆ ಸ್ಥಳದಲ್ಲಿ ಏನಿತ್ತು ಎಂಬುದು ಶೋಧನೆಯಾಗಬೇಕು, ಜನರಿಗೆ ಅದನ್ನು ತಿಳಿಯುವ ಹಕ್ಕಿದೆ. ಜೈಪುರದಲ್ಲಿನ ಕುಟುಂಬದ ಬಳಿ ದಾಖಲೆಗಳಿವೆ...' ಎಂದು ದಿಯಾ ಕುಮಾರಿ ಹೇಳಿದ್ದಾರೆ.

'ಭೂಮಿಯ ಬದಲಿಗೆ ಪರಿಹಾರವನ್ನು ನೀಡಲಾಗಿತ್ತು. ಆದರೆ, ಅದು ಎಷ್ಟು, ಅದನ್ನು ಸ್ವೀಕರಿಸಲಾಗಿತ್ತೇ ಅಥವಾ ಇಲ್ಲವೇ, ಅದನ್ನು ನಾನು ಹೇಳಲಾಗುವುದಿಲ್ಲ. ಏಕೆಂದರೆ, ನಮ್ಮ ಸಂಗ್ರಹಗಾರದಲ್ಲಿರುವ ದಾಖಲೆಗಳನ್ನು ನಾನು ಓದಿಲ್ಲ. ಆದರೆ, ಜಾಗವು ನಮ್ಮ ಕುಟುಂಬಕ್ಕೆ ಸೇರಿದ್ದಾಗಿತ್ತು ಹಾಗೂ ಶಾಹ್‌ ಜಹಾನ್‌ ಅದನ್ನು ಆಕ್ರಮಿಸಿಕೊಂಡರು' ಎಂದು ವಿವರಿಸಿದ್ದಾರೆ.

'ಆಗ ನ್ಯಾಯಾಲಯಗಳು ಇರದ ಕಾರಣ, ಬಹುಶಃ ಮನವಿ ಸಲ್ಲಿಸಲು ಆಗಿಲ್ಲ. ದಾಖಲೆಗಳನ್ನು ಪರಿಶೀಲಿಸಿದ ನಂತರ ಎಲ್ಲವೂ ಪರಿಹಾರವಾಗಲಿವೆ. ಅಗತ್ಯವಾದರೆ ನ್ಯಾಯಾಲಯಕ್ಕೆ ದಾಖಲೆಗಳನ್ನು ಒದಗಿಸಲಾಗುತ್ತದೆ' ಎಂದು ಬಿಜೆಪಿ ನಾಯಕಿ ದಿಯಾ ಕುಮಾರಿ ಹೇಳಿದ್ದಾರೆ.

'ಕೊಠಡಿಗಳ ಬಾಗಿಲುಗಳನ್ನು ಮುಚ್ಚಿರುವುದೇಕೆ ಎಂಬುದು ಜನರಿಗೆ ತಿಳಿಯಬೇಕಿದೆ. ತಾಜ್‌ ಮಹಲ್‌ಗೂ ಮುನ್ನ ಅಲ್ಲಿ ಏನಾದರೂ ಇದ್ದಿರಬಹುದು, ದೇವಾಲಯವೂ ಇದ್ದಿರಬಹುದು...' ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.