ADVERTISEMENT

ವಯನಾಡು: ಪರಿಹಾರ ಕಾರ್ಯಕ್ಕೆ ಕರ್ನಾಟಕದಿಂದ ಇಬ್ಬರು IAS ಅಧಿಕಾರಿಗಳ ನಿಯೋಜನೆ- CM

​ಪ್ರಜಾವಾಣಿ ವಾರ್ತೆ
Published 30 ಜುಲೈ 2024, 13:29 IST
Last Updated 30 ಜುಲೈ 2024, 13:29 IST
<div class="paragraphs"><p>ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸಿಲುಕಿದವರ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ</p></div>

ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸಿಲುಕಿದವರ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ

   

ಪಿಟಿಐ ಚಿತ್ರ

ನವದೆಹಲಿ: ಭೂ ಕುಸಿತದಿಂದ ತತ್ತರಿಸಿರುವ ವಯನಾಡಿನಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗೆ ಎಲ್ಲ ರೀತಿಯ ಸಹಕಾರ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದು ಇದಕ್ಕಾಗಿ ಇಬ್ಬರು ಐಎಎಸ್‌ ಅಧಿಕಾರಿಗಳನ್ನು ನಿಯೋಜಿಸಿದ್ದಾರೆ.

ADVERTISEMENT

ವಯನಾಡಿನಲ್ಲಿ ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆಗೆ ನೆರವಾಗಲು ಬೆಂಗಳೂರಿನಲ್ಲಿರುವ ಎನ್‌ಡಿಆರ್‌ಎಫ್ ತಂಡ ಹಾಗೂ ಮದ್ರಾಸ್ ಎಂಜಿನಿಯರ್ ಗ್ರೂಪ್ ಸೇನಾ ಪಡೆಯ ತಂಡಗಳು ತ್ವರಿತವಾಗಿ ತೆರಳಲು ಹಾಗೂ ಅಗತ್ಯ ಉಪಕರಣಗಳು ಮತ್ತು ಇತರ ಅಗತ್ಯ ಪರಿಹಾರ ಸಾಮಗ್ರಿಗಳನ್ನು ರವಾನೆ ಮಾಡಲು ನೆರವು ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಎಂಇಜಿ ಯ ಒಬ್ಬರು ಅಧಿಕಾರಿ, ಇಬ್ಬರು ಜೆ.ಸಿ.ಓ. ಗಳು ಹಾಗೂ 70 ಮಂದಿ ವಿವಿಧ ದರ್ಜೆಯ ಸಿಬ್ಬಂದಿ ಈಗಾಗಲೇ ರಕ್ಷಣೆ ಹಾಗೂ ಪರಿಹಾರ ಸಾಮಗ್ರಿಗಳೊಂದಿಗೆ 15 ವಾಹನಗಳಲ್ಲಿ ವಯನಾಡಿಗೆ ತೆರಳಿದ್ದಾರೆ. ಇನ್ನೂ ಇಬ್ಬರು ಅಧಿಕಾರಿಗಳು, ನಾಲ್ಕು ಮಂದಿ ಜೆ.ಸಿ.ಓ.ಗಳು, ಹಾಗೂ 100 ಮಂದಿ ಸೇನಾ ಸಿಬ್ಬಂದಿ ರಕ್ಷಣಾ ಉಪಕರಣಗಳೊಂದಿಗೆ 40 ವಾಹನಗಳಲ್ಲಿ ತೆರಳಲಿದ್ದಾರೆ ಎಂದು ತಿಳಿಸಿದ್ದಾರೆ.

ಈ ತಂಡಗಳು ವಯನಾಡಿಗೆ ಶೀಘ್ರವೇ ತಲುಪಲು ಅನುವಾಗುವಂತೆ, ಬಂಡಿಪುರ ಚೆಕ್ ಪೋಸ್ಟ್ ನಲ್ಲಿ ಈ ಎನ್‌ಡಿಆರ್‌ಎಫ್ ಹಾಗೂ ಸೇನೆಯ ತಂಡಗಳಿಗೆ ಹಾಗೂ ಪರಿಹಾರ ಸಾಮಗ್ರಿಗಳ ಸಾಗಾಣಿಕೆ ವಾಹನಗಳಿಗೆ ಗ್ರೀನ್‌ ಕಾರಿಡಾರ್‌ ಮೂಲಕ ಅನಿರ್ಬಂಧಿತ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಸೂಚನೆ ನೀಡಲಾಗಿದೆ.

ಕರ್ನಾಟಕ ಸರ್ಕಾರವು ಕೇರಳ ಸರ್ಕಾರದ ವಿಪತ್ತು ನಿರ್ವಹಣಾ ಸಂಬಂಧಿಸಿದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಅಗತ್ಯ ನೆರವು ಒದಗಿಸಲಾಗುತ್ತಿದೆ. ಅಲ್ಲದೆ ಗಡಿ ಭಾಗದ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ಜಿಲ್ಲಾಧಿಕಾರಿಗಳು ಸಹ ಸೂಕ್ತ ಬೆಂಬಲ ನೀಡುತ್ತಿದ್ದಾರೆ.

ವೈದ್ಯಕೀಯ ನೆರವು, ಆಸ್ಪತ್ರೆ ಸೌಲಭ್ಯ ಹಾಗೂ ಗಾಯಾಳುಗಳನ್ನು ಕರೆತರಲು ಬಸ್‌ಗಳನ್ನು ಹೆಚ್‌.ಡಿ. ಕೋಟೆಯಲ್ಲಿ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.

ಚಾಮರಾಜನಗರ ಜಿಲ್ಲಾಡಳಿತವೂ ಜಿಲ್ಲೆಯ ಗಡಿಭಾಗದಿಂದ ವಯನಾಡಿಗೆ ಆಗಾಗ ತೆರಳುವ ನಾಗರಿಕರ ನೆರವಿಗಾಗಿ ಸಹಾಯವಾಣಿ ಪ್ರಾರಂಭಿಸಿದೆ.

ಮುಖ್ಯಮಂತ್ರಿಗಳು ಸ್ವತಃ ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸುತ್ತಿದ್ದು ವಯನಾಡಿನಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಚರಣೆಗೆ ಎಲ್ಲ ರೀತಿಯ ಬೆಂಬಲ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಇದಲ್ಲದೆ ವಯನಾಡಿನಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಳ ಕುರಿತಂತೆ ಸಮನ್ವಯಕ್ಕಾಗಿ ಹಿರಿಯ ಐಎಎಸ್‌ ಅಧಿಕಾರಿ ಪಿ.ಸಿ. ಜಾಫರ್‌ (ಮೊಬೈಲ್‌ ಸಂಖ್ಯೆ 9448355577) ಹಾಗೂ ದಿಲೀಶ್‌ ಶಶಿ (9446000514) ಅವರನ್ನು ನಿಯೋಜಿಸಲಾಗಿದೆ.

ಕನ್ನಡಿಗರ ರಕ್ಷಣೆಗೆ ಪ್ರಯತ್ನ

ವಯನಾಡಿನಲ್ಲಿ ಕನ್ನಡಿಗರು ಸಿಲುಕಿಕೊಂಡಿರುವ ಬಗ್ಗೆ ಪ್ರಾಥಮಿಕ ಮಾಹಿತಿ ದೊರೆತಿದ್ದು, ಅವರ ರಕ್ಷಣೆಗೆ ಎಲ್ಲ ಪ್ರಯತ್ನ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

ತ್ಯಾಜ್ಯ ವಿಲೇವಾರಿಗೆ ನೆರವು

ವಯನಾಡಿನಲ್ಲಿ ಭೂಕುಸಿತದಿಂದ ಉಂಟಾಗಿರುವ ತ್ಯಾಜ್ಯಗಳ ತೆರವಿಗೆ ರಾಜ್ಯದಿಂದ ಅಗತ್ಯ ಜೆಸಿಬಿ, ಕ್ರೇನ್ ಮತ್ತಿತರ ಭಾರೀ ವಾಹನಗಳ ಸೌಕರ್ಯಗಳನ್ನು ಲೋಕೋಪಯೋಗಿ ಇಲಾಖೆ ನೀಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.