ಕೋಯಿಕ್ಕೋಡ್: ಇಲ್ಲಿನ ವಿಮಾನ ನಿಲ್ದಾಣವು ಟೇಬಲ್ ಟಾಪ್ ಸ್ವರೂಪದ ವಿಮಾನ ನಿಲ್ದಾಣ. ಈ ಸಂಬಂಧ ತಜ್ಞರು ಈ ಹಿಂದೆಯೇ ವರದಿ ಸಲ್ಲಿಸಿದ್ದರು. ಅದನ್ನು ಕಡೆಗಣಿಸಿ ವಿಮಾನ ಕಾರ್ಯಾಚರಣೆ ಮುಂದುವರಿಸಲಾಗಿತ್ತು. ಹೀಗಾಗಿಯೇ ಈಗ ಅವಘಡ ಸಂಭವಿಸಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ.
ವಾಯುಯಾನ ಸುರಕ್ಷಾ ತಜ್ಞ ಕ್ಯಾಪ್ಟನ್ ರಂಗನಾಥನ್ ಎಂಬುವವರು ಈ ಬಗ್ಗೆ ನೀಡಿರುವ ಹೇಳಿಕೆಯನ್ನು ಹಲವು ಸುದ್ದಿವಾಹಿನಿಗಳು ಪ್ರಸಾರಮಾಡಿವೆ.
‘ಕೋಯಿಕ್ಕೋಡ್ ವಿಮಾನ ನಿಲ್ದಾಣದ ರನ್‌ವೇಯ ಎರಡೂ ಕಡೆ 200 ಅಡಿಗಿಂತಲೂ ಆಳದ ಕಮರಿಗಳಿವೆ. ವಿಮಾನಗಳ ಕಾರ್ಯಾಚರಣೆಗೆ ಇದು ಸುರಕ್ಷಿತವಲ್ಲ ಎಂದು ಒಂಬತ್ತು ವರ್ಷಗಳ ಹಿಂದೆಯೇ ವರದಿ ನೀಡಿದ್ದೆ. ಅದನ್ನು ಕಡೆಗಣಿಸಿ, ರನ್‌ವೇ ಸುರಕ್ಷಿತ ಎಂದು ಘೋಷಣೆ ಮಾಡಲಾಯಿತು. ಕಾರ್ಯಾಚರಣೆ ಮುಂದುವರಿಸಲಾಯಿತು. ಇಂದಿನದ್ದು ಅಪಘಾತವಲ್ಲ, ಕೊಲೆ’ ಎಂದು ಅವರು ಹೇಳಿದ್ದಾರೆ.
ಈ ಹೇಳಿಕೆಯು ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿದೆ. ಹಲವರು ಈ ಹೇಳಿಕೆಯನ್ನು ಟ್ವಿಟರ್, ಫೇಸ್‌ಬುಕ್ ಮತ್ತು ವಾಟ್ಸ್‌ಆ್ಯಪ್‌ಗಳಲ್ಲಿ ಹಂಚಿಕೊಂಡಿದ್ದಾರೆ. ತಜ್ಞರ ಎಚ್ಚರಿಕೆಯನ್ನು ಕಡೆಗಣಿಸಲಾಗಿತ್ತೇ ಎಂದು ಪ್ರಶ್ನಿಸಿದ್ದಾರೆ.
‘ಈ ವಿಮಾನ ನಿಲ್ದಾಣ ಮತ್ತು ರನ್‌ವೇ ಚಿಕ್ಕದೇನಲ್ಲ, ದೊಡ್ಡದು. ಇಲ್ಲಿಂದ ದೊಡ್ಡ ವಿಮಾನಗಳೂ ಕಾರ್ಯಾಚರಣೆ ಮಾಡುತ್ತವೆ. ಇಂದಿನ ಅವಘಡಕ್ಕೆ ಪ್ರತಿಕೂಲ ಹವಾಮಾನ, ಭಾರಿ ಮಳೆ ಮತ್ತು ಭಾರಿವೇಗದಲ್ಲಿ ಬೀಸುತ್ತಿದ್ದ ಗಾಳಿ ಕಾರಣವಿರಬಹುದು’ ಎಂದು ಸಂಸದ ಶಶಿ ತರೂರ್ ಹೇಳಿದ್ದಾರೆ.
ಈ ಮೊದಲು ಈ ವಿಮಾನ ನಿಲ್ದಾಣದ ರನ್‌ವೇಯ ಉದ್ದ ಕಡಿಮೆ ಇತ್ತು. ಆಗ ಬೋಯಿಂಗ್ 737–200 ಮಾದರಿಯ ದೊಡ್ಡ ವಿಮಾನಗಳು ಕಾರ್ಯಾಚರಣೆ ನಡೆಸುತ್ತಿರಲಿಲ್ಲ. ಎರಡು ವರ್ಷಗಳ ಹಿಂದೆಯಷ್ಟೇ ಅದರ ಉದ್ದವನ್ನು ಹೆಚ್ಚಿಸಲಾಗಿತ್ತು. ಆನಂತರ
ದೊಡ್ಡ ವಿಮಾನಗಳ ಕಾರ್ಯಾಚರಣೆಯನ್ನು ವಿಮಾನಯಾನ ಸಂಸ್ಥೆಗಳು ಆರಂಭಿಸಿದವು ಎಂದು ಹಲವು ಸುದ್ದಿತಾಣಗಳು ವರದಿ
ಮಾಡಿವೆ. ಈ ವರದಿಗಳನ್ನೂ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಲ್ಯಾಂಡಿಂಗ್‌ಗೆ ಎರಡು ಬಾರಿ ಯತ್ನ:ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಎರಡು ಬಾರಿ ಲ್ಯಾಂಡಿಂಗ್‌ಗೆ ಯತ್ನಿಸಿತ್ತು ಎಂದು ಸ್ವೀಡನ್‌ನ ‘ಫ್ಲೈಟ್‌ರೆಡಾರ್24’ ಎಂಬ ಸಂಸ್ಥೆ ಹೇಳಿದೆ.
ಈ ಸಂಸ್ಥೆಯು ವಾಣಿಜ್ಯ ವಿಮಾನಗಳ ರಿಯಲ್‌ಟೈಂ ಹಾರಾಟ ದತ್ತಾಂಶವನ್ನು ಒದಗಿಸುತ್ತದೆ. ಕೋಯಿಕ್ಕೋಡ್ ವಿಮಾನ
ನಿಲ್ದಾಣದಲ್ಲಿ ಈ ವಿಮಾನವು ಅಪಘಾತಕ್ಕೆ ಈಡಾಗುವ ಮುನ್ನ, ಲ್ಯಾಂಡ್ ಆಗಲು ವಿಫಲ ಯತ್ನ ನಡೆಸಿರುವುದು ದಾಖಲಾಗಿದೆ ಎಂದು ಫ್ಲೈಟ್‌ರೆಡಾರ್24 ಹೇಳಿದೆ.
ತನಿಖೆ: ವಿಮಾನ ಅಪಘಾತ ತನಿಖಾ ಸಂಸ್ಥೆಯು ದುರಂತದ ಕುರಿತು ತನಿಖೆ ನಡೆಸಲಿದೆ ಎಂದು ವಿಮಾನಯಾನ ಸಚಿವ ಹರ್ದೀಪ್‌ಸಿಂಗ್ ಪುರಿ ಹೇಳಿದ್ದಾರೆ.
ಏರ್ ಇಂಡಿಯಾ, ಭಾರತ ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ವಿಮಾನ ಅಪಘಾತ ತನಿಖಾ ಸಂಸ್ಥೆಯ ತಜ್ಞರ ಎರಡು ತಂಡಗಳು ಕೋಯಿಕ್ಕೋಡ್‌ಗೆ ತೆರಳಿ ತನಿಖೆ ನಡೆಸಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.