ಬನಿಹಾಲ್/ಜಮ್ಮು : ಜಮ್ಮು– ಶ್ರೀನಗರ ಹೆದ್ದಾರಿಯ ಎರಡು ಸ್ಥಳಗಳಲ್ಲಿ ಭೂಕುಸಿತ ಉಂಟಾಗಿದೆ. ಹೀಗಾಗಿ ಅಮರನಾಥ ಯಾತ್ರೆಗೆ ಮೂಲ ಶಿಬಿರದಿಂದ ಹೊರಟಿರುವ ಸುಮಾರು 3 ಸಾವಿರಕ್ಕೂ ಹೆಚ್ಚಿನ ಯಾತ್ರಾರ್ಥಿಗಳ ಹೊಸ ತಂಡದ ಬೆಂಗಾವಲು ವಾಹನಗಳ ಸಂಚಾರವನ್ನು, ಶನಿವಾರ ರಾಂಬನ್‌ನಲ್ಲಿ ಕೆಲಕಾಲ ಸ್ಥಗಿತಗೊಳಿಸಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
270 ಕಿ.ಮೀ. ಹೆದ್ದಾರಿಯಲ್ಲಿ ಮೆಹರ್ ಮತ್ತು ದಲ್ವಾಸ್ ಪ್ರದೇಶಗಳಲ್ಲಿ ಮಳೆಯಿಂದಾಗಿ ಭೂಕುಸಿತ ಉಂಟಾಗಿತ್ತು. ಆದರೆ, ಕಲ್ಲುಮಣ್ಣಿನ ಅವಶೇಷಗಳನ್ನು ತೆರವುಗೊಳಿಸಿದ ನಂತರ ವಾಹನ ಸಂಚಾರ ಮತ್ತೆ ಆರಂಭವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
3,472 ಯಾತ್ರಾರ್ಥಿಗಳ 20ನೇ ತಂಡವು ಶನಿವಾರ ನಸುಕಿನಲ್ಲಿ ಜಮ್ಮುವಿನ ಭಗವತಿ ನಗರ ಮೂಲ ಶಿಬಿರದಿಂದ 132 ವಾಹನಗಳಲ್ಲಿ ಹೊರಟಿತು. ಆದರೆ, ಹೆದ್ದಾರಿಯನ್ನು ಮುಚ್ಚಿದ್ದರಿಂದ ಬೆಂಗಾವಲು ವಾಹನಗಳನ್ನು ಚಂದರ್‌ಕೋಟೆಯಲ್ಲಿ ನಿಲ್ಲಿಸಲಾಯಿತು. ಕೆಲ ಸಮಯದ ನಂತರ ಯಾತ್ರಾರ್ಥಿಗಳಿಗೆ ಯಾತ್ರೆ ಸೇರಿಕೊಳ್ಳಲು ಅವಕಾಶ ನೀಡಲಾಯಿತು. ಅವರೆಲ್ಲರೂ ಮಧ್ಯಾಹ್ನ ಬನಿಹಾಲ್ ತಲುಪಿದರು. ಎಂದು ಅವರು ಹೇಳಿದರು.
‘ಇವರಲ್ಲಿ, 2,515 ಯಾತ್ರಾರ್ಥಿಗಳು ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಿಂದ ಮತ್ತು 957 ಯಾತ್ರಾರ್ಥಿಗಳು ಗಂದರ್‌ಬಲ್ ಜಿಲ್ಲೆಯ ಬಾಲ್‌ಟಾಲ್ ಮಾರ್ಗದಿಂದ ಅಮರನಾಥ ಗುಹೆ ದೇಗುಲಕ್ಕೆ ಯಾತ್ರೆ ಕೈಗೊಳ್ಳಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶನಿವಾರ ನಸುಕಿನಲ್ಲಿ ದೋಡಾ ಜಿಲ್ಲೆಯ ಕೋಟಾ ನುಲ್ಲಾದ ಸುತ್ತಲೂ ಮೇಘಸ್ಫೋಟ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ
ಮೇಘಸ್ಪೋಟ: ಲಡಾಖ್‌ನಲ್ಲಿ ಪ್ರವಾಹ
ಶ್ರೀನಗರ : ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನಲ್ಲಿ ಸಂಭವಿಸಿದ ಮೇಘಸ್ಫೋಟದಿಂದ ಹಠಾತ್ ಪ್ರವಾಹ ಉಂಟಾಗಿದೆ. ಇದರಿಂದ ಮುಖ್ಯ ಮಾರುಕಟ್ಟೆ ಪ್ರದೇಶಕ್ಕೆ ಅವಶೇಷಗಳ ರಾಶಿಯೇ ನುಗ್ಗಿಬಂದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಆದರೆ, ಯಾವುದೇ ಜೀವಹಾನಿ ಆಗಿರುವ ಬಗ್ಗೆ ವರದಿ ಬಂದಿಲ್ಲ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಮೇಘಸ್ಫೋಟವು ಶುಕ್ರವಾರ ತಡರಾತ್ರಿ ಕೇಂದ್ರಾಡಳಿತ ಪ್ರದೇಶದ ಗ್ಯಾಂಗಲ್ಸ್ ಪ್ರದೇಶಕ್ಕೆ ಅಪ್ಪಳಿಸಿದೆ. ಲೇಹ್ ಪಟ್ಟಣದ ಹಲವು ಭಾಗಗಳು ಜಲಾವೃತವಾಗಿವೆ. ಪ್ರವಾಹದ ನೀರಿನಲ್ಲಿ ಕೊಚ್ಚಿಕೊಂಡ ಬಂದ ಅವಶೇಷಗಳು ತಗ್ಗು ಪ್ರದೇಶಗಳಲ್ಲಿನ ಅನೇಕ ಕಟ್ಟಡಗಳಿಗೆ ನುಗ್ಗಿ, ಹಾನಿ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಹಠಾತ್ ಪ್ರವಾಹ ಸಂಭವಿಸಿದ ಕೂಡಲೇ ಸೇನೆಯ ಯೋಧರು ಸ್ವಯಂಪ್ರೇರಿತವಾಗಿ ತಕ್ಷಣವೇ ಆಗಮಿಸಿ ಹಾನಿ ತಗ್ಗಿಸಲು ನೆರವಾದರು. ಸೇನೆಗೆ ಧನ್ಯವಾದ ಹೇಳುವೆ’ ಎಂದು ಲಡಾಖ್ ಬೌದ್ಧ ಸಂಘದ ಅಧ್ಯಕ್ಷ ಥುಪ್‌ಸ್ತಾನ್ ಚೆವ್ವಾಂಗ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.