ADVERTISEMENT

ವಯನಾಡು ಭೂಕುಸಿತ ‘ರಾಷ್ಟ್ರೀಯ ವಿಪತ್ತು’ ಎಂದ ರಾಹುಲ್ ಗಾಂಧಿ

ಪಿಟಿಐ
Published 1 ಆಗಸ್ಟ್ 2024, 13:20 IST
Last Updated 1 ಆಗಸ್ಟ್ 2024, 13:20 IST
<div class="paragraphs"><p>ರಾಹುಲ್ ಗಾಂಧಿ</p></div>

ರಾಹುಲ್ ಗಾಂಧಿ

   

ಪಿಟಿಐ

ವಯನಾಡು(ಕೇರಳ): ವಯನಾಡುವಿನಲ್ಲಿ ಸಂಭವಿಸಿದ ಭಾರಿ ಭೂಕುಸಿತವನ್ನು ‘ರಾಷ್ಟ್ರೀಯ ವಿಪತ್ತು’ ಎಂದು ಕರೆದಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ದುರಂತದಲ್ಲಿ ಕುಟುಂಬದ ಸದಸ್ಯರು ಮತ್ತು ಮನೆಗಳನ್ನು ಕಳೆದುಕೊಂಡಿರುವ ಜನರನ್ನು ಕಂಡು ದುಃಖವಾಯಿತು ಎಂದು ಹೇಳಿದರು.

ADVERTISEMENT

ಇಲ್ಲಿನ ಆಸ್ಪತ್ರೆ ಮತ್ತು ‌ಪರಿಹಾರ ಶಿಬಿರಗಳಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್‌, ‘ಇದು ವಯನಾಡು, ಕೇರಳ ಮತ್ತು ರಾಷ್ಟ್ರದಲ್ಲೇ ಭೀಕರ ದುರಂತವಾಗಿದೆ’ ಎಂದು ಹೇಳಿದರು.

‘ನನ್ನ ಪ್ರಕಾರ ಇದೊಂದು ರಾಷ್ಟ್ರೀಯ ವಿಪತ್ತು. ಆದರೆ ಕೇಂದ್ರ ಸರ್ಕಾರ ಏನು ಹೇಳುತ್ತದೋ ನೋಡಬೇಕಿದೆ’ ಎಂದರು.

‘ಇಲ್ಲಿನ ಪರಿಸ್ಥಿತಿಯ ಬಗ್ಗೆ ತಿಳಿದುಕೊಳ್ಳಲು ನಾವು ಇಲ್ಲಿಗೆ ಬಂದಿದ್ದೇವೆ. ಮನೆ ಮತ್ತು ಕುಟುಂಬದವರನ್ನು ಕಳೆದುಕೊಂಡು ದುಃಖಿಸುತ್ತಿರುವ ಜನರನ್ನು ಕಂಡು ಬಹಳ ನೋವಾಗಿದೆ. ಇಂತಹ ಸಂದರ್ಭದಲ್ಲಿ ಅವರೊಂದಿಗೆ ಮಾತನಾಡುವುದಕ್ಕೂ ತುಂಬಾ ಕಷ್ಟವಾಗುತ್ತಿದೆ’ ಎಂದು ಹೇಳಿದರು.

‘ಇದು ನನ್ನ ಜೀವನದಲ್ಲೇ ಅತ್ಯಂತ ಕಷ್ಟಕರ ದಿನವಾಗಿದೆ. ಆದರೂ ಸಂತ್ರಸ್ತರಿಗೆ ಸಿಗಬೇಕಾಗಿರುವುದನ್ನು ಕೊಡಿಸುವತ್ತ ಪ್ರಯತ್ನ ಮಾಡುತ್ತೇನೆ’ ಎಂದು ಹೇಳಿದರು.

ಇದೇ ವೇಳೆ ಮಾತನಾಡಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಸಂತ್ರಸ್ತರಿಗೆ ಸಹಾಯ ಮಾಡಲು, ಅವರಿಗೆ ಬೇಕಾದ ಬೆಂಬಲ ಮತ್ತು ಸಾಂತ್ವಾನವನ್ನು ನೀಡಲು ನಾವು ಇಲ್ಲಿಗೆ ಬಂದಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.