ADVERTISEMENT

ಅರುಣಾಚಲ | ಭಾರಿ ಮಳೆಯಿಂದಾಗಿ ಭೂಕುಸಿತ; ಅಲ್ಲಲ್ಲಿ ಸಂಚಾರ ಸ್ಥಗಿತ

ಪಿಟಿಐ
Published 29 ಜೂನ್ 2024, 15:13 IST
Last Updated 29 ಜೂನ್ 2024, 15:13 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇಟಾನಗರ: ಮಳೆಯಿಂದಾಗಿ ಸಂಭವಿಸಿರುವ ಭೂಕುಸಿತದ ಕಾರಣ ಅರುಣಾಚಲ ಪ್ರದೇಶದ ಹಲವೆಡೆ ರಸ್ತೆ ಸಂಪರ್ಕಗಳು ಕಡಿತಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಪಶ್ಚಿಮ ಸಿಯಾಂಗ್‌ ಜಿಲ್ಲೆಯ ಆಲೊ ಇಂದ ಶಿಯೋಮಿ ಜಿಲ್ಲೆಯ ಮೆಚುಕಾ ನಡುವಿನ ರಸ್ತೆಯು ಸತತ ಮಳೆಯಿಂದ ಹಾನಿಗೀಡಾಗಿದೆ. ಶಿಯೋಮಿ ಜಿಲ್ಲೆಯಲ್ಲಿ ಸೇನೆ ನಿಯೋಜಿಸುವ ನಿಟ್ಟಿನಲ್ಲಿ ಈ ರಸ್ತೆಯು ಮಹತ್ವ ಪಡೆದಿದೆ. 

ರಸ್ತೆಗಳಲ್ಲಿ ಬಿದ್ದಿರುವ ಅವಶೇಷಗಳನ್ನು ತೆರವುಗೊಳಿಸಲು ಗಡಿ ರಸ್ತೆ ಸಂಸ್ಥೆಯು (ಬಿಆರ್‌ಒ) ಕೆಲಸ ಆರಂಭಿಸಿದೆ. ಅನುಕೂಲಕರ ಹವಾಮಾನ ಪರಿಸ್ಥಿತಿ ಮುಂದುವರಿದರೆ, ಸದ್ಯದಲ್ಲೇ ಲಘು ವಾಹನಗಳ ಸಂಚಾರಕ್ಕೆ ರಸ್ತೆಯನ್ನು ಮುಕ್ತ ಮಾಡಲಾಗುವುದು ಎಂದು ಶಿಯೋಮಿ ಜಿಲ್ಲಾ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿ (ಡಿಐಪಿಆರ್‌ಒ) ತಿಳಿಸಿದ್ದಾರೆ. 

ADVERTISEMENT

ಪಸಿಘಾಟ್‌– ಪಂಗಿನ್‌– ಆಲೊ ನಡುವಿನ ರಸ್ತೆಯೂ ಸಿಯಾಂಗ್‌ ಜಿಲ್ಲೆಯ ತಾರಕ್‌ ಗ್ರಾಮದ ಬಳಿ ಹಾನಿಗೀಡಾಗಿದೆ. ಇದರಿಂದಾಗಿ ಹಲವು ವಾಹನಗಳು ರಸ್ತೆಯಲ್ಲೇ ನಿಂತಿವೆ.

ರಾಜ್ಯದ ರಾಜಧಾನಿ ಇಟಾನಗರದಲ್ಲಿಯ ರಾಷ್ಟ್ರೀಯ ಹೆದ್ದಾರಿ– 415ನಲ್ಲಿದ್ದ ಅನಧಿಕೃತ ಕಟ್ಟಡಗಳನ್ನು ಜಿಲ್ಲಾಡಳಿತವು ತೆರವುಗೊಳಿಸುತ್ತಿವೆ. ಈ ಕಟ್ಟಡಗಳು ಮಳೆ ನೀರು ಹರಿದುಹೋಗದಂತೆ ತಡೆಯುತ್ತಿದ್ದವು ಎನ್ನಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.