ಕೊಲಂಬೊ: ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಸೋಮವಾರ ಪಕ್ಷದ ಚುನಾವಣಾ ಮುಖಂಡರ ಜೊತೆ ಸಭೆ ನಡೆಸಿದರು. ಶ್ರೀಲಂಕಾ ಪ್ರೀಡಂ ಪಾರ್ಟಿಯ (ಎಸ್‌ಎಲ್‌ಪಿಎಫ್) ಮುಖ್ಯಸ್ಥರೂ ಆಗಿರುವ ಸಿರಿಸೇನಾ ಅವರು ಅವಧಿಗೂ ಮುನ್ನವೇ ಅಧ್ಯಕ್ಷೀಯ ಚುನಾವಣೆಗೆ ಹೋಗುವ ಸಾಧ್ಯತೆಗಳಿವೆ.
ಅಧ್ಯಕ್ಷರ ನಿವಾಸದಲ್ಲಿ ನಡೆದ ಸಭೆಯಲ್ಲಿ ಪಕ್ಷದ ಭವಿಷ್ಯದ ಯೋಜನೆ ಹಾಗೂ ಪಕ್ಷ ಸಂಘಟನೆಯ ಚಟುವಟಿಕೆಗಳ ಅಮೂಲಾಗ್ರ ಬದಲಾವಣೆ ಕುರಿತಂತೆ ಪಕ್ಷದ ನಾಯಕರಿಗೆ ವಿವರಣೆ ನೀಡಲಾಗಿದೆ.
‘ಪಕ್ಷದ ಭವಿಷ್ಯದ ಸುಧಾರಣೆಗಳ ಬಗ್ಗೆ ಚರ್ಚಿಸಲಾಗಿದ್ದು, ಜನವರಿಯಿಂದಲೇ ಈ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುವುದು, ಸುಧಾರಣೆ ಕಾರ್ಯಕ್ರಮಗಳಿಗೆ ಪಕ್ಷದ ಕಾರ್ಯಕರ್ತರು ಸಹಕಾರ ನೀಡಬೇಕು ಎಂದು ಅಧ್ಯಕ್ಷರು ತಿಳಿಸಿದ್ದಾರೆ ’ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ರೋಹನ ಲಕ್ಷ್ಮಣ್ ತಿಳಿಸಿದರು.
‘ಮುಂದಿನ ವರ್ಷ ಅಧ್ಯಕ್ಷೀಯ ಮತ್ತು ಪ್ರಾಂತೀಯ ಚುನಾವಣೆ ನಡೆಯುವ ಸಾಧ್ಯತೆಗಳಿದ್ದು, ಚುನಾವಣಾ ವರ್ಷ’ಕ್ಕೆ ಎಲ್ಲರೂ ಅಣಿಯಾಗಿರಬೇಕು ಎಂದು ಸಿರಿಸೇನಾ ಅವರು ಪಕ್ಷದ ಮುಖಂಡರಿಗೆ ಸೂಚನೆ ನೀಡಿದರು ’ ಎಂದು ಶ್ರೀಲಂಕಾದ ಆಂಗ್ಲದೈನಿಕ ‘ಡೇಲಿ ನ್ಯೂಸ್’ ವರದಿ ಮಾಡಿದೆ.
ಸಿರಿಸೇನಾ ಅವರ ಅಧ್ಯಕ್ಷೀಯ ಅವಧಿ 2020ರ ಜನವರಿ 8ಕ್ಕೆ ಮುಕ್ತಾಯಗೊಳ್ಳಲಿದೆ. ಇತ್ತೀಚಿಗೆ ನಡೆದ ರಾಜಕೀಯ ಬಿಕ್ಕಟ್ಟಿನ ಬಳಿಕ ಅವಧಿಗೂ ಮುನ್ನವೇ ಚುನಾವಣೆಗೆ ಹೋಗುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.