ನವದೆಹಲಿ: 'ಕಳೆದ 10 ವರ್ಷಗಳಲ್ಲಿ ಬಿಜೆಪಿಯು 'ಜಾತ್ಯತೀತ' ಅಥವಾ 'ನಾಗರಿಕ'ರ ಪರವೂ ಆಗಿರಲಿಲ್ಲ' ಎಂದು ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಅವರು ಪ್ರಧಾನಿ ನರೇಂದ್ರ ಮೋದಿಗೆ ತಿರುಗೇಟು ನೀಡಿದ್ದಾರೆ.
78ನೇ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ದೇಶದಲ್ಲಿ 'ಜಾತ್ಯತೀತ ನಾಗರಿಕ ಸಂಹಿತೆ' ಜಾರಿಗೊಳಿಸುವ ತುರ್ತು ಅಗತ್ಯದ ಕುರಿತು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದರು.
ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ 'ಸದ್ಯದ ನಾಗರಿಕ ಸಂಹಿತೆ 'ಕೋಮುವಾದಿ ಮತ್ತು ತಾರತಮ್ಯ' ಸ್ವರೂಪದಿಂದ ಕೂಡಿದ್ದು, ದೇಶವನ್ನು ಧರ್ಮದ ಆಧಾರದಲ್ಲಿ ವಿಭಜನೆ ಮಾಡಿದೆ. ಇಂತಹ ಸಂಹಿತೆಯೊಂದಿಗೆ ನಾವು 75 ವರ್ಷ ಜೀವಿಸಿದ್ದೇವೆ. ಆದರೆ, ಜಾತ್ಯತೀತ ನಾಗರಿಕ ಸಂಹಿತೆ ಇಂದಿನ ತುರ್ತು ಅಗತ್ಯ' ಎಂದು ಹೇಳಿದ್ದರು.
ಈ ಕುರಿತು ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಉಲ್ಲೇಖ ಮಾಡಿರುವ ರಾಜ್ಯಸಭಾ ಸಂಸದ ಕಪಿಲ್ ಸಿಬಲ್, 'ಜಾತ್ಯತೀತ ಮತ್ತು ನಾಗರಿಕ ದೇಶವು ಈಗಿನ ತುರ್ತು ಅಗತ್ಯ. ಆದರೆ ಕಳೆದ 10 ವರ್ಷಗಳಲ್ಲಿ ಬಿಜೆಪಿಯು ಜಾತ್ಯತೀತ ಅಥವಾ ನಾಗರಿಕರ ಪರವೂ ಆಗಿರಲಿಲ್ಲ' ಎಂದು ಹೇಳಿದ್ದಾರೆ.
ಮಗದೊಂದು ಪೋಸ್ಟ್‌ನಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಯನ್ನು ಕಳವಳಕಾರಿ ಎಂದು ಹೇಳಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸರಸಂಘಚಾಲಕ ಮೋಹನ್ ಭಾಗವತ್ ಅವರ ಹೇಳಿಕೆಯನ್ನು ಒಪ್ಪಿಕೊಂಡಿರುವ ಸಿಬಲ್, 'ಅವರ ಸುರಕ್ಷತೆ ಹಾಗೂ ಭದ್ರತೆಗಾಗಿ ನಮಗೆ ಸಾಧ್ಯವಾದುದ್ದನ್ನು ಮಾಡಬೇಕು. ಆದರೆ ಎಲ್ಲೇ ಆದರೂ ಅಲ್ಪಸಂಖ್ಯಾತರ ಮೇಲಿನ ದಾಳಿ ಅತ್ಯಂತ ಕಳವಳಕಾರಿ' ಎಂದು ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.