ಕೊಚ್ಚಿ(ಕೇರಳ): ಇಲ್ಲಿನ ಯಹೂದಿ ಸಮುದಾಯಕ್ಕೆ ಸೇರಿದ ಕೊನೆಯ ಮಹಿಳೆ ಕ್ವೀನಿ ಹಲ್ಲೆಗುವಾ(89) ವಯೋಸಹಜ ಕಾಯಿಲೆಯಿಂದ ಮಟ್ಟಂಚೇರಿಯಲ್ಲಿರುವ ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದಾರೆ.
ಕ್ವೀನಿ ಹಲ್ಲೆಗುವಾ ಅವರು ಭಾನುವಾರ ಮೃತಪಟ್ಟಿದ್ದು, ಅವರ ಅಂತ್ಯಕ್ರಿಯೆಯನ್ನು ಇಲ್ಲಿನ ಯಹೂದಿ ಸ್ಮಶಾನದಲ್ಲಿ ಸಮುದಾಯದ ವಿಧಿ ವಿಧಾನಗಳ ಪ್ರಕಾರ ನಡೆಸಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಹಲ್ಲೆಗುವಾ ಅವರು ಮಗ ಮತ್ತು ಮಗಳನ್ನು ಅಗಲಿದ್ದು, ಮಕ್ಕಳಿಬ್ಬರು ಅಮೆರಿಕದಲ್ಲಿ ವಾಸವಾಗಿದ್ದಾರೆ.
‘65 ವರ್ಷದ ಕೀತ್ ಹಲ್ಲೆಗುವಾ(ಕ್ವೀನಿ ಹಲ್ಲೆಗುವಾ ಅವರ ಸಹೋದರಳಿಯ) ಕೊಚ್ಚಿಯಲ್ಲಿ ಉಳಿದಿರುವ ಏಕೈಕ ಯಹೂದಿ ಸಮುದಾಯದ ಸದಸ್ಯ’ ಎಂದು ‘ಪರದೇಸಿ ಸಿನಗಾಗ್‘ ಟ್ರಸ್ಟ್‌ನ ಎಂ.ಸಿ. ಪ್ರವೀಣ್ ಹೇಳಿದರು.
‘ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಹಲ್ಲೆಗುವಾ ಅವರನ್ನು ನೋಡಿಕೊಳ್ಳಲು ಅವರ ಮಕ್ಕಳು ಇಲ್ಲಿಗೆ ಬಂದಿದ್ದರು. ಭಾನುವಾರ ಅವರು ಮೃತಪಟ್ಟಿದ್ದಾರೆ. ಏಳು ದಿನಗಳ ಕಾಲ ಶೋಕಾಚರಣೆ ಇರಲಿದೆ. ಅವರ ನೆನಪಿನಲ್ಲಿ ಸಮಾಧಿ ಕಟ್ಟಿಸಲಾಗುತ್ತದೆ’ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.