ನವದೆಹಲಿ: ಇಂಡಿಯಾ ಗೇಟ್ ಬಳಿಯಿರುವ ಅಮರ್ ಜವಾನ್ ಜ್ಯೋತಿಗೆ ಹುತಾತ್ಮ ಯೋಧರ ಗೌವರವಾರ್ಥವಾಗಿಗಣರಾಜ್ಯೋತ್ಸವ ದಿನದಂದು ಸಾಂಪ್ರದಾಯಿಕವಾಗಿ ಸಲ್ಲಿಸಲಾಗುವ ಗೌರವ ವಂದನೆ ಕಾರ್ಯಕ್ರಮವು ಈ ವರ್ಷಕ್ಕೆ ಕೊನೆಯಾಗಲಿದೆ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಥ ಸಂಚಲನಕ್ಕೂಮುನ್ನ ನಡೆಯುವ ಈ ಕಾರ್ಯಕ್ರಮವನ್ನು ಮುಂದಿನ ವರ್ಷದಿಂದ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಆಯೋಜಿಸಲು ಉದ್ದೇಶಿಸಲಾಗಿದೆ ಎಂಬುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಬಾಂಗ್ಲಾದೇಶವು 1971ರಲ್ಲಿ ಪಾಕಿಸ್ತಾನದಿಂದ ವಿಮೋಚನೆ ಪಡೆಯಿತು. ಬಾಂಗ್ಲಾದೇಶ ಸ್ವಾತಂತ್ರ್ಯ ಹೋರಾಟದ ವೇಳೆ ಹುತಾತ್ಮರಾಗಿದ್ದ3,843 ಸೈನಿಕರಿಗೆ ಇಂಧಿರಾ ಗಾಂಧಿ ಅವರು 1972ರ ಜನವರಿಯಲ್ಲಿಗೌರವ ಸಮರ್ಪಿಸಿದ್ದರು. ಬಳಿಕ ಪ್ರತಿವರ್ಷ ಈ ಕಾರ್ಯಕ್ರಮವು ಸಾಂಪ್ರದಾಯಿಕವಾಗಿ ನಡೆದು ಬರುತ್ತಿತ್ತು.
ಮೊದಲ ಮಹಾಯುದ್ಧ ಹಾಗೂ ಆಂಗ್ಲೋ–ಅಫ್ಘಾನ್ ಯುದ್ಧಗಳಲ್ಲಿ ಹೋರಾಡಿ ಜೀವ ಕಳೆದುಕೊಂಡಿದ್ದ ಲಕ್ಷಾಂತರ ಯೋಧರ ಗೌರವಾರ್ಥವಾಗಿ ಬ್ರಿಟಿಷ್ ಸರ್ಕಾರ ಇಂಡಿಯಾ ಗೇಟ್ ಸ್ಮಾರಕವನ್ನು ನಿರ್ಮಿಸಿತ್ತು.
2014ರ ಲೋಕಸಭೆ ಚುನಾವಣೆ ಸಂದರ್ಭ ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿ ಕೂಟರಾಷ್ಟ್ರೀಯ ಯುದ್ಧ ಸ್ಮಾರಕ ನಿರ್ಮಿಸುವ ಭರವಸೆ ನೀಡಿತ್ತು. ಅದು ಈಗ ಬಹುತೇಕ ಪೂರ್ಣಗೊಂಡಿದೆ. ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿಯವರೆಗೆ ವಿವಿಧ ರಕ್ಷಣಾ ಕಾರ್ಯಚರಣೆ ಸಂದರ್ಭಗಳಲ್ಲಿ ಹುತಾತ್ಮರಾಗಿರುವ ಸುಮಾರು 26ಸಾವಿರ ಯೋಧರಿಗೆ ಗೌರವ ಸಲ್ಲಿಸುವ ಸ್ಮಾರಕ ಇದಾಗಿದೆ. ಯುದ್ಧ ಸ್ಮಾರಕವು ಇಂಡಿಯಾ ಗೇಟ್ ಸಮೀಪ ಸುಮಾರು 40 ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ನಿರ್ಮಾಣವಾಗುತ್ತಿದೆ.ಅಮರತ್ವ, ಶೌರ್ಯ, ತ್ಯಾಗ ಮತ್ತು ರಕ್ಷಣೆಯನ್ನು ಬಿಂಬಿಸುವ ನಾಲ್ಕು ವೃತ್ತಗಳು ಹಾಗೂ ಪರಮವೀರ ಚಕ್ರ ಪುರಸ್ಕೃತ 21 ವೀರರಪ್ರತಿಮೆಗಳೂ ಇಲ್ಲಿರಲಿವೆ ಎಂದು ಮತ್ತೊಬ್ಬ ಅಧಿಕಾರಿ ಮಾಹಿತಿ ನೀಡಿದರು.
ಗಣರಾಜ್ಯೋತ್ಸವ ದಿನಕ್ಕೂ ಮುನ್ನ ಯುದ್ಧ ಸ್ಮಾರಕವನ್ನು ಉದ್ಘಾಟಿಸುವ ಯೋಜನೆ ಇದೆಯಾದರೂಆ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದೆ. ‘ಲೋಕಸಭೆ ಚುನಾವಣೆ ಸನಿಹದಲ್ಲಿರುವುದರಿಂದ ಅನಗತ್ಯವಾಗಿ ಸೃಷ್ಟಿಯಾಗಬಹುದಾದ ರಾಜಕೀಯ ವಿವಾದವನ್ನು ತಡೆಯಲು ಸರ್ಕಾರ ಬಯಸಿದೆ’ ಎಂದಿದ್ದಾರೆ.ಅಮರ್ ಜವಾನ್ ಜ್ಯೋತಿ ಸ್ಮಾರಕದಲ್ಲಿ ಇನ್ನು ಮುಂದೆಯೂ ನಿರಂತರವಾಗಿ ಜ್ಯೋತಿ ಬೆಳಗಲಿದೆ. ಯುದ್ಧ ಸ್ಮಾರಕವು ಸಾರ್ವಜನಿಕ ಪ್ರವೇಶಕ್ಕೆ ತೆರೆದುಕೊಂಡ ಬಳಿಕ ರಾಷ್ಟ್ರಮಟ್ಟದ ಎಲ್ಲ ಕಾರ್ಯಕ್ರಮಗಳೂ ಇಲ್ಲಿಗೇ ಸ್ಥಳಾಂತರಗೊಳ್ಳಲಿವೆ ಎಂದೂ ತಿಳಿಸಿದ್ದಾರೆ.
‘ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ಪ್ರಾರಂಭಿಸುವುದು ಸ್ವಾಗತಾರ್ಹ ಕ್ರಮ. ಆದರೆ, ಉದ್ಘಾಟನೆ ಸಂದರ್ಭದಲ್ಲಿ ಎಲ್ಲ ರಾಜಕೀಯ ಪಕ್ಷಗಳ ಪ್ರತಿನಿಧಿಗಳು,ಶೌರ್ಯ ಪ್ರಶಸ್ತಿ ಪುರಸ್ಕೃತರು ಮತ್ತು ಅನುಭವಿಗಳು ಭಾಗವಹಿಸಬೇಕು’ ಎಂದು ಸೇನಾ ಇತಿಹಾಸಜ್ಞ ಮನ್‌ದೀಪ್ ಸಿಂಗ್ ಬಾಜ್ವಾ ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.