ನವದೆಹಲಿ (ಪಿಟಿಐ): ತಮಿಳುನಾಡಿನಲ್ಲಿ ಸೇನಾ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟ, ಸೇನೆಯ ಆರು ಜನರ ಗುರುತನ್ನು ಶನಿವಾರ ಪತ್ತೆಹಚ್ಚಲಾಗಿದ್ದು, ಮೃತದೇಹಗಳನ್ನು ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು. ಪಾರ್ಥಿವ ಶರೀರಗಳನ್ನು ತಮ್ಮ ಊರುಗಳಿಗೆ ಒಯ್ದ ಸಂಬಂಧಿಕರು ಅಂತ್ಯಸಂಸ್ಕಾರ ನೆರವೇರಿಸಿದರು.
ಜೂನಿಯರ್ ವಾರಂಟ್ ಆಫೀಸರ್‌ಗಳಾದ ಪ್ರದೀಪ್, ರಾಣಾ ಪ್ರತಾಪ್ ದಾಸ್, ವಿಂಗ್ ಕಮಾಂಡರ್ ಪಿ.ಎಸ್. ಚೌಹಾಣ್, ಲ್ಯಾನ್ಸ್ ನಾಯ್ಕ್ ಬಿ. ಸಾಯಿತೇಜ ಮತ್ತು ಲ್ಯಾನ್ಸ್ ನಾಯ್ಕ್ ವಿವೇಕ್ ಕುಮಾರ್, ಸ್ಕ್ವಾಡ್ರನ್ ಲೀಡರ್ ಕುಲದೀಪ್ ಸಿಂಗ್ ಅವರು ಅವಘಡದಲ್ಲಿ ಮೃತಪಟ್ಟಿದ್ದರು.
ರಾಜಸ್ಥಾನದ ಝುಂಝನು ಜಿಲ್ಲೆಯ ಘರಡಾನ ಖುರ್ದ್ ಗ್ರಾಮದಲ್ಲಿಸ್ಕ್ವಾಡ್ರನ್ ಲೀಡರ್ ಕುಲದೀಪ್ ಸಿಂಗ್ ಅವರ ಅಂತ್ಯಕ್ರಿಯೆ ನಡೆಯಿತು. ಅಂತಿಮ ನಮನ ಸಲ್ಲಿಸಲು ಸಾವಿರಾರು ಜನರು ಗ್ರಾಮಕ್ಕೆ ಬಂದಿದ್ದರು.ವಿಂಗ್ ಕಮಾಂಡರ್ ಪೃಥ್ವಿ ಸಿಂಗ್ ಚೌಹಾಣ್ ಅವರ ಅಂತ್ಯಸಂಸ್ಕಾರವು ಆಗ್ರಾದ ತಾಜ್‌ಗಂಜ್ ಚಿತಾಗಾರದಲ್ಲಿ ನಡೆಯಿತು. ಕೇರಳದ ತ್ರಿಶ್ಶೂರ್ ಜಿಲ್ಲೆಯವರಾದ ಪ್ರದೀಪ್ ಅವರ ಅಂತ್ಯಕ್ರಿಯೆಯು ಪೊನ್ನುಕ್ಕರ ಗ್ರಾಮದಲ್ಲಿ ಶನಿವಾರ ಸಂಜೆ ನಡೆಯಿತು.
ಒಡಿಶಾದ ಭುವನೇಶ್ವರದಲ್ಲಿ ರಾಣಾ ಪ್ರತಾಪ್ ದಾಸ್ ಅವರ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಿ, ಅಂಗುಲ್ ಜಿಲ್ಲೆಯ ಕೃಷ್ಣಚಂದ್ರಪುರದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಲ್ಯಾನ್ಸ್ ನಾಯ್ಕ್ ಸಾಯಿತೇಜ ಅವರ ಕುಟುಂಬಕ್ಕೆ ಆಂಧ್ರಪ್ರದೇಶ ಸರ್ಕಾರ ₹50 ಲಕ್ಷ ಪರಿಹಾರ ಘೋಷಿಸಿದೆ.ಸಾಯಿತೇಜ ಅವರ ಮೃತದೇಹವನ್ನು ಬೆಂಗಳೂರಿಗೆ ತರಲಾಗಿದ್ದು, ಅವರ ಹುಟ್ಟೂರಾದ ಚಿತ್ತೂರು ಜಿಲ್ಲೆಯ ಯಗುವರೆಗಡಿಪಲ್ಲಿ ಗ್ರಾಮಕ್ಕೆ ಭಾನುವಾರ ತಲುಪುವ ನಿರೀಕ್ಷೆಯಿದೆ.
ಗುರುತು ಪತ್ತೆಯಾಗಬೇಕಿರುವ ಮೃತದೇಹಗಳನ್ನು ದೆಹಲಿಯ ಕಂಟೋನ್ಮೆಂಟ್‌ನಲ್ಲಿರುವ ಸೇನಾ ಆಸ್ಪತ್ರೆಯಲ್ಲಿ ಇರಿಸಲಾಗಿದೆ.ಗುರುತು ಪತ್ತೆಯಾಗಿದ್ದ ಸೇನಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ಮತ್ತು ಬ್ರಿಗೇಡಿಯರ್ ಲಖ್ವಿಂದರ್ ಸಿಂಗ್ ಲಿದ್ದರ್ ಅವರ ಅಂತ್ಯಕ್ರಿಯೆ ಶುಕ್ರವಾರ ನಡೆದಿತ್ತು.
ರಾವತ್ ವಿರುದ್ಧ ಅವಹೇಳನಕಾರಿ ಸಂದೇಶ, ವ್ಯಕ್ತಿಯ ಬಂಧನ:( ಜೈಪುರ ವರದಿ): ಜೈಪುರ: ತಮಿಳುನಾಡಿನ ಕೂನೂರಿನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಹುತಾತ್ಮರಾದ ಸೇನಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಕಾರಿ ಸಂದೇಶ ಪ್ರಕಟಿಸಿದ ವ್ಯಕ್ತಿಯೊಬ್ಬರನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ. ‘ಆರೋಪಿ ಜಾವೇದ್ ಖಾನ್ (21) ಟೊಂಕ್ ನಗರದ ನಜಾರ್‌ಬಾಗ್ ರಸ್ತೆಯ ನಿವಾಸಿ’ ಎಂದು ಟೊಂಕ್‌ನ ಕೊತ್ವಾಲಿ ಪೊಲೀಸ್ ಠಾಣೆಯ ಎಸ್‌ಎಚ್‌ಒ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.
‘ನನ್ನ ಮಗ ಹೋರಾಟ ಗೆಲ್ಲುತ್ತಾನೆ’
ಭೋಪಾಲ್: ಹೆಲಿಕಾಪ್ಟರ್ ಪತನದಲ್ಲಿ ಬದುಕುಳಿದಿರುವ ಏಕೈಕ ಸೇನಾ ಸಿಬ್ಬಂದಿ ಭಾರತೀಯ ವಾಯು
ಪಡೆಯ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರ ಆರೋಗ್ಯದಲ್ಲಿ ಏರುಪೇರಾಗುತ್ತಿದೆ. ಹಾಗಿದ್ದರೂ ಅವರು ಆರೋಗ್ಯವಂತರಾಗಿ ಮರಳುವ ವಿಶ್ವಾಸವನ್ನು ಅವರ ತಂದೆ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.