ಮುಂಬೈ: ಹರಿಯಾಣ ಪೊಲೀಸರು ರೈತರ ಮೇಲೆ ಲಾಠಿ ಪ್ರಹಾರ ನಡೆಸಿರುವುದನ್ನು ‘ಎರಡನೇ ಜಲಿಯನ್‌ವಾಲಾ ಬಾಗ್‘ ಎಂದು ಕರೆದಿರುವ ಶಿವಸೇನಾ, ಇಂಥ ಕೃತ್ಯಕ್ಕೆ ಕಾರಣವಾದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯಲು ಯಾವುದೇ ಹಕ್ಕಿಲ್ಲ ಎಂದು ವಾಗ್ದಾಳಿ ನಡೆಸಿದೆ.
‘ಪ್ರಧಾನಿ ನರೇಂದ್ರ ಮೋದಿಯವರು ಅಮೃತ್‌ಸರದಲ್ಲಿ ನವೀಕೃತ ಜಲಿಯನ್‌ವಾಲಾಬಾಗ್ ಸಂಕೀರ್ಣವನ್ನು ಉದ್ಘಾಟಿಸಿದ್ದಾರೆ. ಅದೇ ಸಮಯದಲ್ಲಿ ಹರಿಯಾಣದಲ್ಲಿ ಜಲಿಯಾನ್‌ವಾಲಾಬಾಗ್ ಹಿಂಸಾಚಾರ ರೀತಿಯ ಘಟನೆ ನಡೆಯುತ್ತಿದೆ‘ ಎಂದು ತನ್ನ ಪಕ್ಷದ ಮುಖವಾಣಿ ‘ಸಾಮ್ನಾ‘ದ ಸಂಪಾದಕೀಯದಲ್ಲಿ ಹೇಳಿದೆ.
‘ಸರ್ಕಾರವು ಬಿತ್ತಿದ ಕ್ರೌರ್ಯದ ಬೀಜಗಳು ಹುಳಿ ಹಣ್ಣುಗಳನ್ನು ನೀಡುತ್ತವೆ. ಇದು ಖಚಿತವಾಗಿದೆ. ಮನೋಹರ್ ಲಾಲ್ ಖಟ್ಟರ್ ಸರ್ಕಾರಕ್ಕೆ ಅಧಿಕಾರದಲ್ಲಿ ಉಳಿಯಲು ಯಾವುದೇ ಹಕ್ಕಿಲ್ಲ‘ ಎಂದು ಹೇಳಿದೆ.
ಪೊಲೀಸರು ನಡೆಸಿರುವ ಲಾಠಿಚಾರ್ಜ್ ಘಟನೆ, ರೈತರು ಸರ್ಕಾರದ ವಿರುದ್ಧ ದಂಗೆಯೇಳುವಂತೆ ಮಾಡಬಹುದು. ಈ ದಾಳಿಯಿಂದ ಹರಿದ ರಕ್ತದ ಪ್ರತಿ ಹನಿಗೂ ಅವರು ಸೇಡು ತೀರಿಸಿಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.