ಶ್ರೀನಗರ: ಸುಮಾರು 60 ರಿಂದ 70 ಭಯೋತ್ಪಾದಕರು ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಮೂಲಕ ದೇಶಕ್ಕೆ ನುಸುಳಲು ಸಜ್ಜಾಗಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕರಾದ ರಶ್ಮಿ ರಂಜನ್ ಸ್ವೈನ್ ಹೇಳಿದ್ದಾರೆ.
ಗಡಿಯಲ್ಲಿ ಸದ್ಯದ ಭದ್ರತೆ ಬಗ್ಗೆ ವಿವರಣೆ ನೀಡಿದ ಡಿಜಿಪಿ, ಡ್ರೋನ್‌ನಿಂದ ಸ್ಫೋಟಕ ಎಸೆಯುವುದು, ನುಸುಳುಕೋರರ ಹಾವಳಿ ಮುಂತಾದ ಸವಾಲು ಎದುರಾಗುತ್ತಿವೆ ಎಂದು ಹೇಳಿದರು.
‘ಪಾಕಿಸ್ತಾನವು ಈಗಲೂ ಸ್ಫೋಟಕ ರವಾನೆ ಮತ್ತು ನುಸುಳುಕೋರರನ್ನು ಕಳುಹಿಸುವ ತನ್ನ ಕೃತ್ಯದಿಂದ ಹಿಂದೆ ಸರಿದಿಲ್ಲ ಎಂಬುದು ನಮ್ಮ ಭದ್ರತಾ ಪಡೆಯ ಸಭೆಗಳಲ್ಲಿ ಚರ್ಚೆಯಾದ ಮಾಹಿತಿಗಳಿಂದ ದೃಢಪಟ್ಟಿದೆ. ಈ ಸಂಬಂಧ ಗಡಿಯಲ್ಲಿ ಲಾಂಚ್ ಪ್ಯಾಡ್‌ಗಳನ್ನು ಸಕ್ರಿಯಗೊಳಿಸಲಾಗಿದೆ’ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮತ್ತು ಸಿಐಡಿ ಎರಡರ ಮುಖ್ಯಸ್ಥರೂ ಆಗಿರುವ ರಶ್ಮಿ ರಂಜನ್ ಹೇಳಿದ್ದಾರೆ.
ಇದೇವೇಳೆ, ಪಶ್ಚಿಮ ಭಾಗದ ಗಡಿಯಲ್ಲಿ ವಿದೇಶಿ ಭಯೋತ್ಪಾದಕರ ಉಪಸ್ಥಿತಿ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ.
ಒಳನುಸುಳುವ ಯತ್ನಗಳಲ್ಲಿ ಕೆಲವನ್ನು ವಿಫಲಗೊಳಿಸಲಾಗಿದೆ. ಆದರೂ ಅಪಾಯ ಇನ್ನೂ ಇದೆ. ಶತ್ರುಗಳು ಈ ಪ್ರದೇಶದಲ್ಲಿ ಅಸ್ಥಿರತೆ ಸೃಷ್ಟಿಸುವುದನ್ನು ತಡೆಯಲು ಕಠಿಣ ಕ್ರಮದ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
‘ಬಹುಶಃ 60ರಿಂದ 70 ಭಯೋತ್ಪಾದಕರು ಐದಾರು ಗುಂಪುಗಳಾಗಿ ವಿವಿಧ ಪ್ರದೇಶಗಳಲ್ಲಿ ಒಳನುಗ್ಗಲು ಕಾಯುತ್ತಿದ್ದಾರೆ. ಸೇನೆ, ಅರೆಸೇನಾಪಡೆ ಮತ್ತು ಪೊಲೀಸರು ಒಟ್ಟಾಗಿ ಉಗ್ರರು ಈ ಕೃತ್ಯದಲ್ಲಿ ಸಫಲರಾಗದಂತೆ ತಡೆಯುತ್ತೇವೆ’ಎಂದೂ ಅವರು ತಿಳಿಸಿದ್ದಾರೆ.
ಡ್ರೋನ್‌ಗಳಿಂದ ಶಸ್ತ್ರಾಸ್ತ್ರಗಳ ಅಕ್ರಮ ಸಾಗಣೆ, ಮದ್ದು ಗುಂಡು, ಸ್ಫೋಟಕಗಳು, ನಗದು ಮತ್ತು ಮಾದಕ ಪದಾರ್ಥಗಳ ಸಾಗಣೆ ದೊಡ್ಡ ಸವಾಲಾಗಿದೆ. ಇವುಗಳನ್ನು ತಡೆಯುವ ನಿಟ್ಟಿನಲ್ಲಿ ಪ್ರಗತಿ ಕಂಡಿದ್ದೇವೆ. ನಿರಂತರವಾಗಿ ಗಡಿಯಲ್ಲಿ ಕಣ್ಗಾವಲು ಇಡುವ ಮೂಲಕ ನುಸುಳುಕೋರರನ್ನು ನಿಗ್ರಹಿಸಬಹುದು ಎಂದು ಅವರು ತಿಳಿಸಿದ್ದಾರೆ.
ಗಡಿ ಪ್ರದೇಶದ ರಕ್ಷಣೆಗೆ ಎಲ್ಲ ಭದ್ರತಾ ಪಡೆಗಳ ಸಾಮೂಹಿಕ ಪ್ರಯತ್ನವನ್ನು ಅವರು ಒತ್ತಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.