ADVERTISEMENT

ಉತ್ತರ ಪ್ರದೇಶ ಪೊಲೀಸರಿಗೆ ಕಾನೂನು– ಸುವ್ಯವಸ್ಥೆ ತಮಾಷೆಯಾಗಿದೆ: ಪ್ರಿಯಾಂಕಾ ಗಾಂಧಿ

ಪಿಟಿಐ
Published 9 ಸೆಪ್ಟೆಂಬರ್ 2024, 10:05 IST
Last Updated 9 ಸೆಪ್ಟೆಂಬರ್ 2024, 10:05 IST
ಪ್ರಿಯಾಂಕಾ ಗಾಂಧಿ ವಾದ್ರಾ
ಪ್ರಿಯಾಂಕಾ ಗಾಂಧಿ ವಾದ್ರಾ   

ಲಖನೌ: ಉತ್ತರ ಪ್ರದೇಶದ ಪೊಲೀಸರಿಗೆ ಕಾನೂನು ಮತ್ತು ಸುವ್ಯವಸ್ಥೆ ಎನ್ನುವುದು ತಮಾಷೆಯಾಗಿದೆ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ವಾಗ್ದಾಳಿ ನಡೆಸಿದ್ದಾರೆ.

ಫೇಸ್ಬುಕ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, ‘ಅಮಾಯಕರನ್ನು ಹಿಂಸಿಸಿ, ಅಪರಾಧಿಗಳನ್ನು ರಕ್ಷಿಸುವುದು ಉತ್ತರ ಪ್ರದೇಶ ಆಡಳಿತದ ಮೂಲ ಮಂತ್ರ’ ಎಂದು ಕುಟುಕಿದ್ದಾರೆ.

‘ರಾಯ್‌ಬರೇಲಿಯಲ್ಲಿ ರವಿ ಚೌರಾಸಿಯಾ ಎನ್ನುವವರ ₹8 ಲಕ್ಷವಿದ್ದ ಬ್ಯಾಗ್‌ ಅನ್ನು ದುಷ್ಕರ್ಮಿಗಳು ಕಳ್ಳತನ ಮಾಡಿದ್ದರು, ಆದರೆ ಯಾವುದೋ ಕಾರಣಕ್ಕೆ ಅವರು ಬ್ಯಾಗ್‌ ಅನ್ನು ರಸ್ತೆ ಬದಿಯಲ್ಲಿ ಇರಿಸಿದ್ದರು. ಅದು ದೀಪು ಎನ್ನುವ ಉದ್ಯಮಿಗೆ ಸಿಕ್ಕಿತ್ತು. ದೀಪು ಅದನ್ನು ಪೊಲೀಸ್‌ ಠಾಣೆಗೆ ನೀಡಲು ಹೋದರೆ ಅವರನ್ನೇ ಜೈಲಿಗೆ ಹಾಕಿದ್ದಾರೆ. ದೀಪು ಅವರನ್ನು ಜೈಲಿನಲ್ಲಿ ಹಾಕಿರುವುದರ ವಿರುದ್ಧ ಪ್ರತಿಭಟನೆಗಳು ನಡೆದ ಕಾರಣ ಪ್ರಕರಣದ ವಿಚಾರಣೆಯನ್ನು ಬೇರೆ ಪೊಲೀಸ್‌ ಠಾಣೆಗೆ ವರ್ಗಾಯಿಸಲಾಗಿತ್ತು. ತನಿಖೆಯ ವೇಳೆ ದೀಪು ಅವರು ನಿರಪರಾಧಿ ಎಂದು ತಿಳಿದುಬಂದ ಕಾರಣ ನ್ಯಾಯಾಲಯ ಅವರಿಗೆ ಜಾಮೀನು ನೀಡಿ ಬಿಡುಗಡೆ ಮಾಡಿದೆ. ಆದರೆ ಪೊಲೀಸರು ಮಾತ್ರ ಅವರ ಮೇಲೆ ಆರೋಪ ಮಾಡಿದ್ದಾರೆ’ ಎಂದು ಪ್ರಿಯಾಂಕಾ ಬರೆದುಕೊಂಡಿದ್ದಾರೆ.

ADVERTISEMENT

ಗೌರವ್‌ ಅಲಿಯಾಸ್‌ ದೀಪು ರಾಯ್‌ಬರೇಲಿಯ ನಿವಾಸಿಯಾಗಿದ್ದರು, ಆ.20ರಂದು ರಸ್ತೆ ಬದಿ ಸಿಕ್ಕ ದುಡ್ಡಿನ ಬ್ಯಾಗ್‌ ಅನ್ನು ಪೊಲೀಸರಿಗೆ ನೀಡಲು ಆ.26ರಂದು ಠಾಣೆಗೆ ತೆರಳಿದ್ದಾಗ ಅವರನ್ನು ಜೈಲಿಗೆ ಹಾಕಲಾಗಿತ್ತು. ಇದರ ವಿರುದ್ಧ ದೀಪು ಗ್ರಾಮಸ್ಥರು ಮತ್ತು ಸ್ಥಳೀಯ ಉದ್ಯಮಿಗಳು ತೀವ್ರವಾಗಿ ಪ್ರತಿಭಟನೆ ನಡೆಸಿ, ಅವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದರು.‌

ಸಾರ್ವಜನಿಕರ ಒತ್ತಡ ಹೆಚ್ಚುತ್ತಿದ್ದಂತೆ ಪೊಲೀಸರು ತನಿಖೆಗೆ ಮುಂದಾಗಿದ್ದರು. ಈ ವೇಳೆ ದೀಪು ಅವರು ಕಳ್ಳತನದಲ್ಲಿ ಭಾಗಿಯಾಗಿಲ್ಲ ಎನ್ನುವುದು ಸಾಬೀತಾಗಿದೆ ಎಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.