ADVERTISEMENT

ಎನ್‌ಆರ್‌ಐ, ಒಸಿಐ ವಿವಾಹಕ್ಕೆ ಕಾನೂನು: ಕೇಂದ್ರ ಕಾನೂನು ಆಯೋಗ ಶಿಫಾರಸು

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2024, 11:20 IST
Last Updated 16 ಫೆಬ್ರುವರಿ 2024, 11:20 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ಅನಿವಾಸಿ ಭಾರತೀಯರು ಮತ್ತು ಭಾರತೀಯ ಪ್ರಜೆಗಳ ನಡುವೆ ‘ಮೋಸದ ಮದುವೆಗಳು’ ಹೆಚ್ಚುತ್ತಿರುವುದು ಕಳವಳಕಾರಿ ಬೆಳವಣಿಗೆ ಎಂದು ಹೇಳಿರುವ ಕೇಂದ್ರ ಕಾನೂನು ಆಯೋಗವು, ಈ ಪರಿಸ್ಥಿತಿಯನ್ನು ನಿಭಾಯಿಸಲು ಸಮಗ್ರವಾದ ಕಾನೂನು ರೂಪಿಸಬೇಕು ಎಂದು ಶಿಫಾರಸು ಮಾಡಿದೆ. ಇಂತಹ ಮದುವೆಗಳ ನೋಂದಣಿಯನ್ನು ಕಡ್ಡಾಯಗೊಳಿಸಬೇಕು ಎಂಬ ಅಂಶವು ಶಿಫಾರಸಿನಲ್ಲಿ ಇದೆ.

‘ಅನಿವಾಸಿ ಭಾರತೀಯರು (ಎನ್‌ಆರ್‌ಐ) ಮತ್ತು ಸಾಗರೋತ್ತರ ಭಾರತೀಯರ (ಒಸಿಐ) ಮದುವೆಗೆ ಸಂಬಂಧಿಸಿದ ವಿಚಾರಗಳ ಕುರಿತ ಕಾನೂನು’ ಹೆಸರಿನ ವರದಿಯನ್ನು ಆಯೋಗದ ಅಧ್ಯಕ್ಷ, ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ಅವರು ಕೇಂದ್ರ ಕಾನೂನು ಸಚಿವಾಲಯಕ್ಕೆ ಸಲ್ಲಿಸಿದ್ದಾರೆ. ಅನಿವಾಸಿ ಭಾರತೀಯರು ಹಾಗೂ ಭಾರತ ಮೂಲದ ವಿದೇಶಿ ಪ್ರಜೆಗಳು ಭಾರತದ ಪ್ರಜೆಗಳನ್ನು ಮದುವೆ ಆದಲ್ಲಿ, ಅದಕ್ಕೆ ಸಂಬಂಧಿಸಿದ ಎಲ್ಲ ಆಯಾಮಗಳನ್ನು ಒಳಗೊಳ್ಳುವ ಸಮಗ್ರವಾದ ಕಾನೂನು ಬೇಕಿದೆ ಎಂಬುದು ಆಯೋಗದ ಅಭಿಪ್ರಾಯ ಎಂದು ಅವಸ್ಥಿ ಹೇಳಿದ್ದಾರೆ.

ADVERTISEMENT

‘ಎನ್‌ಆರ್‌ಐಗಳು ಮತ್ತು ಭಾರತೀಯ ಪ್ರಜೆಗಳ ನಡುವೆ ಮೋಸದ ಮದುವೆಗಳು ಹೆಚ್ಚಾಗುತ್ತಿರುವುದು ಚಿಂತೆ ಮೂಡಿಸುವಂತಿವೆ. ಇಂತಹ ಮದುವೆಗಳ ಹಿಂದಿನ ವಂಚನೆಯ ಉದ್ದೇಶವನ್ನು ಹೇಳುವ ವರದಿಗಳು ಇವೆ, ಇಂತಹ ಮದುವೆಗಳು ಭಾರತೀಯ ಸಂಗಾತಿಯನ್ನು, ಅದರಲ್ಲೂ ಮುಖ್ಯವಾಗಿ ಮಹಿಳೆಯನ್ನು, ಮದುವೆಯ ನಂತರದಲ್ಲಿ ಪರಾಧೀನದ ಸ್ಥಿತಿಗೆ ನೂಕಿವೆ’ ಎಂದು ಅವಸ್ಥಿ ಅವರು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರಿಗೆ ವರದಿಯ ಜೊತೆ ಸಲ್ಲಿಸಿರುವ ಪತ್ರದಲ್ಲಿ ಹೇಳಿದ್ದಾರೆ.

ಪ್ರಸ್ತಾವಿತ ಕಾನೂನು ಎನ್‌ಆರ್‌ಐಗಳಿಗೆ ಮಾತ್ರವೇ ಅಲ್ಲದೆ, ಪೌರತ್ವ ಕಾಯ್ದೆ 1955ರಲ್ಲಿ ನೀಡಲಾಗಿರುವ ‘ಸಾಗರೋತ್ತರ ಭಾರತೀಯ’ ಎಂಬ ವ್ಯಾಖ್ಯಾನದ ಅಡಿಯಲ್ಲಿ ಬರುವ ಎಲ್ಲರಿಗೂ ಅನ್ವಯವಾಗಬೇಕು ಎಂದು ಆಯೋಗವು ಹೇಳಿದೆ. ಈ ಕಾನೂನಿನ ಅಡಿಯಲ್ಲಿ ವಿಚ್ಛೇದನ, ಜೀವನಾಂಶ, ಮಕ್ಕಳನ್ನು ನೋಡಿಕೊಳ್ಳುವ ಹೊಣೆ, ಎನ್‌ಆರ್‌ಐ ಹಾಗೂ ಸಾಗರೋತ್ತರ ಭಾರತೀಯರಿಗೆ ಸಮನ್ಸ್‌, ವಾರಂಟ್ ಅಥವಾ ನ್ಯಾಯಾಂಗದ ದಾಖಲೆಗಳನ್ನು ತಲುಪಿಸುವ ಬಗೆಯ ಕುರಿತು ವಿವರಣೆ ಇರಬೇಕು ಎಂದು ಅವಸ್ಥಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.