ಕೊಚ್ಚಿ(ಪಿಟಿಐ): ವಿವಾಹಯೇತರ ಸಹ ಜೀವನಕ್ಕೆ ಕಾನೂನಿನಡಿ ಮಾನ್ಯತೆ ಇಲ್ಲ. ಶಾಸ್ತ್ರೋಕ್ತವಾಗಿ ನಡೆಯುವ ಮದುವೆಗಷ್ಟೇ ಕಾನೂನಿನ ಮನ್ನಣೆ ಲಭಿಸುತ್ತದೆ. ಪರಸ್ಪರ ಒಪ್ಪಂದದ ಮೇರೆಗೆ ನಡೆಸುವ ಸಹ ಜೀವನವನ್ನು ಮದುವೆಯೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ.
2006ರಿಂದಲೂ ಹಿಂದೂ ಮತ್ತು ಕ್ರೈಸ್ತ ಧರ್ಮಕ್ಕೆ ಸೇರಿದ ಪುರುಷ ಮತ್ತು ಮಹಿಳೆಯೊಬ್ಬರು ಸಹ ಜೀವನ ನಡೆಸುತ್ತಿದ್ದು, ಅವರಿಗೆ ಮಗುವೂ ಇದೆ. ಈ ಇಬ್ಬರು ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದರು. ಶಾಸ್ತ್ರೋಕ್ತವಾಗಿ ಇಬ್ಬರಿಗೂ ಮದುವೆಯಾಗಿಲ್ಲ. ಹಾಗಾಗಿ, ವಿಚ್ಛೇದನ ನೀಡಲು ಸಾಧ್ಯವಿಲ್ಲ ಎಂದು ಕೋರ್ಟ್ ಅರ್ಜಿಯನ್ನು ವಜಾಗೊಳಿಸಿತ್ತು. ಈ ಆದೇಶವನ್ನು ಇಬ್ಬರೂ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎ. ಮೊಹಮ್ಮದ್ ಮುಸ್ತಾಕಿಯಾ ಮತ್ತು ಸೋಫಿ ಥಾಮಸ್ ಅವರಿದ್ದ ವಿಭಾಗೀಯ ಪೀಠವು, ಸಹ ಜೀವನದ ಆಧಾರದ ಮೇಲೆ ಮದುವೆಯ ಹಕ್ಕು ಸ್ಥಾಪಿಸಲು ಅಥವಾ ವಿಚ್ಛೇದನ ಕೋರಲು ಬರುವುದಿಲ್ಲ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.