ನವದೆಹಲಿ: ದೇಶದ್ರೋಹ ಪ್ರಕರಣಗಳಲ್ಲಿ ವಿಧಿಸುವ ಜೈಲುಶಿಕ್ಷೆ ಅವಧಿಯನ್ನು ಕನಿಷ್ಠ ಮೂರು ವರ್ಷಗಳಿಂದ ಏಳು ವರ್ಷಗಳವರೆಗೆ ಹೆಚ್ಚಿಸಬೇಕು. ಇದರಿಂದ, ಅಪರಾಧ ಕೃತ್ಯದ ಗಂಭೀರತೆ ಹಾಗೂ ಪ್ರಮಾಣಕ್ಕೆ ಅನುಗುಣವಾಗಿ ಶಿಕ್ಷೆ ವಿಧಿಸಲು ನ್ಯಾಯಾಲಯಗಳಿಗೆ ಹೆಚ್ಚು ಅವಕಾಶ ಕಲ್ಪಿಸಿದಂತಾಗಲಿದೆ ಎಂದು ಕಾನೂನು ಆಯೋಗ ಶಿಫಾರಸು ಮಾಡಿದೆ.
ಕರ್ನಾಟಕ ಹೈಕೋರ್ಟ್‌ನ ನಿವೃತ್ತ ಮುಖ್ಯನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ಆಯೋಗವು ಕೇಂದ್ರ ಕಾನೂನು ಸಚಿವ ಅರ್ಜುನ್ ಮೆಘವಾಲ್ ಅವರಿಗೆ ಈ ಕುರಿತ ವರದಿ ಸಲ್ಲಿಸಿದೆ.
‘ದೇಶದ್ರೋಹ ಪ್ರಕರಣದಲ್ಲಿ, ಐಪಿಸಿ ಸೆಕ್ಷನ್ 124ಎ ಅಡಿ ಅಪರಾಧಿಗೆ ಜೀವಾವಧಿ ಶಿಕ್ಷೆ ಇಲ್ಲವೇ ಮೂರು ವರ್ಷ ಸೆರೆವಾಸ ವಿಧಿಸಲು ಅವಕಾಶ ಇದೆ. ಇದು ಅಸಮರ್ಪಕ ಎಂಬುದಾಗಿ ಆಯೋಗವು ಈ ಹಿಂದೆ ಸಲ್ಲಿಸಿದ್ದ ವರದಿಯಲ್ಲಿ ಹೇಳಲಾಗಿತ್ತು’ ಎಂದು ವರದಿಯಲ್ಲಿ ವಿವರಿಸಲಾಗಿದೆ.
‘ಐಪಿಸಿಯ 6ನೇ ಅಧ್ಯಾಯದಲ್ಲಿ ಹೇಳಿರುವಂತೆ ಶಿಕ್ಷೆಯ ಪ್ರಮಾಣಗಳನ್ನು ತುಲನೆ ಮಾಡಿದಾಗ, ಸೆಕ್ಷನ್ 124ಎ ಅಡಿ ವಿವರಿಸಿರುವ ಶಿಕ್ಷೆಯ ಪ್ರಮಾಣದಲ್ಲಿ ಭಾರಿ ವ್ಯತ್ಯಾಸ ಇರುವುದು ಕಂಡುಬರುತ್ತದೆ’ ಎಂದು ವರದಿಯಲ್ಲಿ ವಿವರಿಸಲಾಗಿದೆ. ಐಪಿಸಿಯ 6ನೇ ಅಧ್ಯಾಯವು ಸರ್ಕಾರದ ವಿರುದ್ಧದ ಅಪರಾಧಗಳ ಕುರಿತು ವಿವರಣೆ ನೀಡುತ್ತದೆ.
ದೇಶದ್ರೋಹದ ಅಪರಾಧಕ್ಕೆ ಶಿಕ್ಷೆ ವಿಧಿಸುವ ಅವಕಾಶವನ್ನು ರದ್ದುಪಡಿಸಬಾರದು. ಕಾನೂನಿನಲ್ಲಿ ಇರುವ ಅವಕಾಶಗಳ ಬಳಕೆ ಬಗ್ಗೆ ಹೆಚ್ಚು ಸ್ಪಷ್ಟತೆ ಇರುವ ರೀತಿ ಸೆಕ್ಷನ್ 124ಎಗೆ ತಿದ್ದುಪಡಿ ತರಬೇಕು ಎಂದು ಆಯೋಗ ಶಿಫಾರಸು ಮಾಡಿದೆ.
ಇದನ್ನು ರದ್ದುಪಡಿಸಿದರೆ ದೇಶದ ಸುರಕ್ಷತೆ ಮತ್ತು ಒಗ್ಗಟ್ಟಿನ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದೂ ಆಯೋಗವು ಪ್ರತಿಪಾದಿಸಿದೆ.
ಆಯೋಗದ ವರದಿ ಕುರಿತು ಪ್ರತಿಕ್ರಿಯಿಸಿರುವ ಕಾನೂನು ಸಚಿವ ಅರ್ಜುನ್ ಮೆಘವಾಲ್, ‘ಕಾನೂನು ಆಯೋಗವು ಸಲ್ಲಿಸಿರುವ ವರದಿಯು ದೇಶದ್ರೋಹ ಕಾನೂನಿನಲ್ಲಿನ ಅವಕಾಶಗಳ ಕುರಿತ ವ್ಯಾಪಕ ಸಮಾಲೋಚನೆ ಪ್ರಕ್ರಿಯೆ ಒಂದು ಭಾಗವಷ್ಟೆ’ ಎಂದಿದ್ದಾರೆ.
‘ವರದಿಯಲ್ಲಿ ಮಾಡಲಾಗಿರುವ ಶಿಫಾರಸುಗಳು ಒಪ್ಪುವಂಥವುಗಳಾಗಿದ್ದರೂ, ಕಡ್ಡಾಯವೇನಲ್ಲ. ಹೀಗಾಗಿ ಎಲ್ಲ ಭಾಗೀದಾರರೊಂದಿಗೆ ಸಮಾಲೋಚನೆ ನಡೆಸಿದ ನಂತರವಷ್ಟೆ, ಆಯೋಗದ ಶಿಫಾರಸು ಕುರಿತು ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ’ ಎಂದು ಟ್ವೀಟ್ ಮಾಡಿದ್ದಾರೆ.
ದೇಶದ್ರೋಹಕ್ಕೆ ಸಂಬಂಧಿಸಿದ ಕಾನೂನು ವಸಾಹತುಶಾಹಿ ಕಾಲದ್ದು. ಈ ಕಾನೂನನ್ನು ಹೆಚ್ಚು ದುರ್ಬಳಕೆ ಮಾಡಲಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದ ಸುಪ್ರೀಂ ಕೋರ್ಟ್, ಸೆಕ್ಷನ್ 124ಎ ಅನ್ನು ಅಮಾನತಿನಲ್ಲಿಟ್ಟು ಕಳೆದ ಮೇ 11ರಂದು ಆದೇಶಿಸಿತ್ತು.
ವರದಿಯಲ್ಲೇನಿದೆ: ‘ಈ ಕಾನೂನು ವಸಾಹತುಶಾಹಿ ಕಾಲದ್ದು ಎಂಬುದು ಕೂಡ ಕಾನೂನನ್ನು ರದ್ದುಗೊಳಿಸಲು ಸಕಾರಣವಾಗಲಾರದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರ ಕುರಿತು ರಚನಾತ್ಮಕ ಹಾಗೂ ಆರೋಗ್ಯಕರ ರೀತಿಯಲ್ಲಿ ಟೀಕಿಸುವ ಸ್ವಾತಂತ್ರ್ಯವನ್ನು ಜನರು ಹೊಂದಿದ್ದಾರೆ’ ಎಂದು ಆಯೋಗ ತನ್ನ ವರದಿಯಲ್ಲಿ ಹೇಳಿದೆ.
‘ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಹಿಂಸೆಗೆ ಪ್ರಚೋದಿಸುವುದು ಅಥವಾ ಸಾರ್ವಜನಿಕ ಸುವ್ಯವಸ್ಥೆಗೆ ಹಾನಿಯನ್ನು ಉಂಟು ಮಾಡುವಂತ ಪ್ರವೃತ್ತಿ ಹೊಂದಿರುವವರನ್ನು ಶಿಕ್ಷಿಸಲು ಐಪಿಸಿ ಸೆಕ್ಷನ್ 124ಎ ಅವಕಾಶ ನೀಡುತ್ತದೆ.
‘ಐಪಿಸಿ ಸೆಕ್ಷನ್ 124ಎಯಂತಹ ಅವಕಾಶಗಳು ಇಲ್ಲದೇ ಹೋದಲ್ಲಿ, ಹಿಂಸೆಗೆ ಪ್ರಚೋದಿಸಿದಂತಹ ಪ್ರಕರಣಗಳ ಕುರಿತು ಭಯೋತ್ಪಾದನೆ ನಿಗ್ರಹ ಮತ್ತು ಇತರ ವಿಶೇಷ ಕಾಯ್ದೆಗಳಡಿ ವಿಚಾರಣೆ ನಡೆಸಬೇಕಾಗುತ್ತದೆ. ಇತರ ಕಾಯ್ದೆಗಳು ಹೆಚ್ಚು ಕಠೋರ ಅವಕಾಶಗಳನ್ನು ಒಳಗೊಂಡಿವೆ’ ಎಂದು ವರದಿಯಲ್ಲಿ ವಿವರಿಸಲಾಗಿದೆ.
‘ಎಫ್‌ಐಆರ್ ದಾಖಲಿಸುವುದಕ್ಕೂ ಮುನ್ನ ಪ್ರಾಥಮಿಕ ತನಿಖೆ ನಡೆಸಬೇಕು ಎಂಬಂತಹ ಅವಕಾಶ ಕಲ್ಪಿಸುವ ಮೂಲಕ ಶಿಕ್ಷೆ ವಿಧಿಸಲು ಇರುವ ಆಯ್ಕೆಯನ್ನು ಉಳಿಸಿಕೊಳ್ಳಬೇಕು’ ಎಂದು ಆಯೋಗ ಸಲಹೆ ನೀಡಿದೆ.
‘ಹಾಗೆ ನೋಡಿದರೆ, ಭಾರತದ ಇಡೀ ಕಾನೂನು ವ್ಯವಸ್ಥೆ ವಸಾಹುತಶಾಹಿ ಪರಂಪರೆಯನ್ನೇ ಅನುಸರಿಸುತ್ತಿದೆ. ನಮ್ಮ ಪೊಲೀಸ್ ವ್ಯವಸ್ಥೆ, ಅಖಿಲ ಭಾರತ ನಾಗರಿಕ ಸೇವೆಯಂತಹ ವ್ಯವಸ್ಥೆ ಕೂಡ ಬ್ರಿಟಿಷ್ ಕಾಲದ ಅವಶೇಷಗಳೇ ಆಗಿವೆ. ಹೀಗಾಗಿ, ಒಂದು ಕಾನೂನು ಅಥವಾ ಸಂಸ್ಥೆ ಕುರಿತು ಹೇಳುವಾಗ ವಸಾಹತುಶಾಹಿ ಎಂಬ ಪದ ಬಳಸಿದಾಕ್ಷಣ, ಸಂಬಂಧಿಸಿದ ಕಾನೂನು,ಸಂಸ್ಥೆ ಅಸಂಬದ್ಧವಾಗದು’ ಎಂದು ಆಯೋಗ ಪ್ರತಿಪಾದಿಸಿದೆ.
ಈಶಾನ್ಯ ಭಾರತದಲ್ಲಿನ ಜನಾಂಗೀಯ ಸಂಘರ್ಷ, ಜಮ್ಮು–ಕಾಶ್ಮೀರದಲ್ಲಿನ ಭಯೋತ್ಪಾದನೆ, ನಕ್ಸಲರು ಹಾಗೂ ಉಗ್ರಗಾಮಿಗಳ ಉಪಟಳ, ಇತರ ಭಾಗಗಳಲ್ಲಿನ ಪ್ರತ್ಯೇಕತಾವಾದದಿಂದ ದೇಶಕ್ಕೆ ಒದಗಿಸುವ ಬೆದರಿಕೆ ಕುರಿತು ಆಯೋಗ ತನ್ನ ವರದಿಯಲ್ಲಿ ಪ್ರಸ್ತಾಪಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.