ನವದೆಹಲಿ: ಬಾಡಿಗೆ ತಾಯ್ತನ ವಿಧಾನದ ಮೂಲಕ ಜನಿಸಿದ ಮಗುವಿನೊಂದಿಗೆ ಬಾಡಿಗೆ ತಾಯಿಯು ಆನುವಂಶಿಕವಾಗಿ ಸಂಬಂಧ ಹೊಂದಿರಬೇಕಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಸ್ಪಷ್ಟನೆ ನೀಡಿದೆ.
‘ಯಾವ ಮಹಿಳೆಯೂ ತನ್ನದೇ ಅಂಡಾಣುಗಳನ್ನು ಒದಗಿಸುವ ಮೂಲಕ ಬಾಡಿಗೆ ತಾಯಿ ಆಗಲು ಬಾಡಿಗೆ ತಾಯ್ತನ ಕಾನೂನು ಅವಕಾಶ ನೀಡುವುದಿಲ್ಲ’ ಎಂದೂ ಕೇಂದ್ರ ಸರ್ಕಾರ ಹೇಳಿದೆ.
ಆದರೆ, ಬಾಡಿಗೆ ತಾಯ್ತನ ವಿಧಾನದ ಮೂಲಕ ಜನಿಸಲಿರುವ ಮಗುವು, ತಾಯಿ ಆಗಲು ಬಯಸುವ ಮಹಿಳೆ (ವಿಧವೆ ಅಥವಾ ವಿಚ್ಛೇದಿತೆ) ಅಥವಾ ಮಗುವನ್ನು ಹೊಂದಲು ಬಯಸುವ ದಂಪತಿಯೊಂದಿಗೆ ಆನುವಂಶಿಕವಾಗಿ ಸಂಬಂಧ ಹೊಂದಿರಲೇಬೇಕು ಎಂದು ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಹೇಳಿದೆ.
ನ್ಯಾಯಮೂರ್ತಿ ಅಜಯ್ ರಸ್ತೋಗಿ ನೇತೃತ್ವದ ನ್ಯಾಯಪೀಠ, ಈ ವಿಷಯಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸಿತು.
ಬಾಡಿಗೆ ತಾಯ್ತನ (ನಿಯಂತ್ರಣ) ಕಾಯ್ದೆ, 2021 ಹಾಗೂ ಸಂತಾನೋತ್ಪತ್ತಿ ನೆರವು ತಂತ್ರಜ್ಞಾನ (ನಿಯಂತ್ರಣ) ಕಾಯ್ದೆ (ಎಆರ್‌ಟಿ ಕಾಯ್ದೆ) 2021ರ ಕೆಲ ನಿಯಮಗಳು ಮಹಿಳೆಯ ಖಾಸಗಿತನ ಹಾಗೂ ಆಕೆಯ ಸಂತಾನೋತ್ಪತ್ತಿ ಹಕ್ಕುಗಳಿಗೆ ವಿರುದ್ಧವಾಗಿವೆ ಎಂದು ದೂರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನೂ ನ್ಯಾಯಪೀಠ ನಡೆಸಿತು.
ಬಾಡಿಗೆ ತಾಯ್ತನ ಕಾಯ್ದೆ ಹಾಗೂ ಎಆರ್‌ಟಿ ಕಾಯ್ದೆಯಡಿ ‘ರಾಷ್ಟ್ರೀಯ ಸಂತಾನೋತ್ಪತ್ತಿ ನೆರವು ತಂತ್ರಜ್ಞಾನ ಹಾಗೂ ಬಾಡಿಗೆ ತಾಯ್ತನ ಮಂಡಳಿ’ಯನ್ನು ರಚಿಸಲಾಗಿದ್ದು, ಕಳೆದ ವರ್ಷ ಮೇನಲ್ಲಿ ಅಧಿಸೂಚನೆ ಹೊರಡಿಸಲಾಗಿದೆ. ಬಿಹಾರ, ಉತ್ತರ ಪ್ರದೇಶ ಹಾಗೂ ಗುಜರಾತ್ ಹೊರತುಪಡಿಸಿ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಮಂಡಳಿ ಅಸ್ತಿತ್ವದಲ್ಲಿದೆ ಎಂದು ಕೇಂದ್ರ ತಿಳಿಸಿದೆ.
ಬಾಡಿಗೆ ತಾಯ್ತನ ಹಾಗೂ ಎಆರ್‌ಟಿಗೆ ಸಂಬಂಧಿಸಿದ ನೀತಿ ನಿರೂಪಣೆ ಕುರಿತು ಮಂಡಳಿಯು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡುವ ಅಧಿಕಾರ ಹೊಂದಿದೆ. ಈ ಎರಡು ಕಾಯ್ದೆಗಳಡಿ ರಚಿಸಲಾಗಿರುವ ವಿವಿಧ ಸಂಸ್ಥೆಗಳ ಕಾರ್ಯದ ಮೇಲ್ವಿಚಾರಣೆ ನಡೆಸುವ ಅಧಿಕಾರವನ್ನು ಸಹ ಮಂಡಳಿಗೆ ನೀಡಲಾಗಿದೆ ಎಂದೂ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.