ನವದೆಹಲಿ: ಬೆಂಗಳೂರಿನಲ್ಲಿ ಎಂಟು ಪಥದ ಪೆರಿಫರಲ್ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರ ಅಹವಾಲನ್ನು ಸೆ.23ರಂದು ವೆಬಿನಾರ್ ಮುಖಾಂತರ ಸಂಗ್ರಹಿಸಲು ಮುಂದಾಗಿರುವುದನ್ನು ಪ್ರಶ್ನಿಸಿ ಮೂವರು ಕಾನೂನು ವಿದ್ಯಾರ್ಥಿಗಳು ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಜಿಂದಾಲ್ ಕಾನೂನು ಶಾಲೆಯ ಪಿ.ಬಿ.ಶಶಾಂಕ್, ಪ್ರತೀಕ್ ಕುಮಾರ್ ಹಾಗೂ ದೆಹಲಿಯ ರಾಷ್ಟ್ರೀಯ ಕಾನೂನು ಶಾಲೆಯ ವಿದ್ಯಾರ್ಥಿನಿ ಅನುಷ್ಕಾ ಗುಪ್ತಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ(ಬಿಡಿಎ) ಈ ಪ್ರಸ್ತಾವವು, ಅಕ್ರಮ, ಅವೈಜ್ಞಾನಿಕ ಎಂದು ವಿದ್ಯಾರ್ಥಿಗಳು ಟೀಕಿಸಿದ್ದಾರೆ.
‘ಗ್ರಾಮೀಣ ಹಾಗೂ ನಗರ ಪ್ರದೇಶದ ಪರಿಸರ ಹಾಗೂ ಜೀವವೈವಿಧ್ಯದ ಮೇಲೆ ಈ ಯೋಜನೆ ಪರಿಣಾಮ ಬೀರಲಿದೆ. ಹೀಗಾಗಿ ಇಂಥ ಯೋಜನೆಯ ಕುರಿತು ಸಾರ್ವಜನಿಕರ ಅಭಿಪ್ರಾಯ ಸಂಗ್ರಹದ ಸಂದರ್ಭದಲ್ಲಿ ವೆಬಿನಾರ್‌ನಂಥ ವ್ಯವಸ್ಥೆಯನ್ನು ಉಪಯೋಗಿಸಿದರೆ, ಹಲವರಿಗೆ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಅವರ ಬಳಿ ಇದಕ್ಕೆ ಅಗತ್ಯವಾದ ತಾಂತ್ರಿಕ ಉಪಕರಣಗಳು ಇರುವುದಿಲ್ಲ. ಹೀಗಾಗಿ ಈ ಸಭೆಯನ್ನು ಆಯೋಜಿಸುವ ಉದ್ದೇಶವೇ ವಿಫಲವಾಗಲಿದೆ’ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
‘ಜೂಮ್’ ಮೂಲಕ ವೆಬಿನಾರ್ ನಡೆಸುವ ಆ.30ರ ಅಧಿಸೂಚನೆಯನ್ನು ರದ್ದುಗೊಳಿಸಲು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ. ವಿದ್ಯಾರ್ಥಿಗಳ ಪರ ವಕಳಿ ಸುಶಾಲ್ ತಿವಾರಿ ಈ ಅರ್ಜಿಯನ್ನು ಸಲ್ಲಿಸಿದ್ದಾರೆ.
ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಪರಿಹಾರವಾಗಿ65 ಕಿ.ಮೀ. ಪೆರಿಫರಲ್ ರಸ್ತೆ ನಿರ್ಮಾಣದ ಪ್ರಸ್ತಾವನೆಯನ್ನು ಸರ್ಕಾರ ಮಾ.18ರಂದು ಸರ್ಕಾರ ಮಂಡಿಸಿತ್ತು. ಯೋಜನೆಯಿಂದಾಗಿ ಪರಿಸರದ ಮೇಲಾಗುವ ಪರಿಣಾಮದ ಕುರಿತು ಮತ್ತೊಮ್ಮೆ ವಿಸ್ತೃತವಾದ ವರದಿ ತಯಾರಿಸಲು ಸುಪ್ರೀಂ ಕೋರ್ಟ್ ಬಿಡಿಎಗೆ ಸೂಚಿಸಿದ್ದರಿಂದ ಯೋಜನೆ ವಿಳಂಬವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.