ಗುವಾಹಟಿ: ಕಳೆದ ವರ್ಷ ನ್ಯಾಯಾಲಯಕ್ಕೆ ಜೀನ್ಸ್ ಧರಿಸಿ ಬಂದಿದ್ದನ್ನು ಸಮರ್ಥಿಕೊಳ್ಳಲು ಪ್ರಯತ್ನಿಸಿದ ವಕೀಲರೊಬ್ಬರ ಅರ್ಜಿಯನ್ನು ಗುವಾಹಟಿ ಹೈಕೋರ್ಟ್ ಇಂದು (ಶುಕ್ರವಾರ) ವಜಾಗೊಳಿಸಿದೆ.
ನ್ಯಾಯಾಲಯದಲ್ಲಿ ಜೀನ್ಸ್ ಧರಿಸುವುದಕ್ಕೆ ಅನುಮತಿ ನೀಡಿದರೆ, ಶೀಘ್ರದಲ್ಲೇ ಹರಿದ, ಮಾಸಿದ ಜೀನ್ಸ್ ಹಾಗೂ ಕಪ್ಪು ಪ್ಯಾಂಟ್ ಅಥವಾ ಪೈಜಾಮಾ ಧರಿಸುವ ಕುರಿತು ಬೇಡಿಕೆಗಳು ಉದ್ಭವಿಸುತ್ತವೆ ಎಂಬ ಕಾರಣಗಳನ್ನು ನೀಡಿ ನ್ಯಾಯಮೂರ್ತಿ ಕಲ್ಯಾಣ್ ರೈ ಸುರಾನಾ ಅವರು ಅರ್ಜಿಯನ್ನು ವಜಾಗೊಳಿಸಿದ್ದಾರೆ.
2023ರ ಏಪ್ರಿಲ್ 15ರಂದು ಪ್ರಕರಣವೊಂದರ ವಾದ ಮಂಡಿಸಲು ನ್ಯಾಯಾಲಯಕ್ಕೆ ವಕೀಲ ಬಿ.ಕೆ. ಮಹಾಜನ್ ಅವರು ಜೀನ್ಸ್ ಪ್ಯಾಂಟ್ ಧರಿಸಿ ಬಂದಿದ್ದರು. ಇದೇ ವೇಳೆ ಅವರನ್ನು ಗುವಾಹಟಿಯ ಹೈಕೋರ್ಟ್ ‘ಡಿಕೋರ್ಟ್’ (ನ್ಯಾಯಾಲಯದಿಂದ ಹೊರಗೆ ಕಳಿಸುವುದು) ಮಾಡಿತ್ತು.
ಬಾರ್ ಕೌನ್ಸಿಲ್ ಆಫ್ ಇಂಡಿಯಾ (ಬಿಸಿಐ) ಮಾರ್ಗಸೂಚಿ ಪ್ರಕಾರ ನ್ಯಾಯಾಲಯದಲ್ಲಿ ಜೀನ್ಸ್ ಧರಿಸುವುದಕ್ಕೆ ನಿರ್ಬಂಧ ಹೇರಲಾಗಿದೆ. ಆದಾಗ್ಯೂ, ಇತ್ತೀಚೆಗೆ ಮಹಾಜನ್ ಅವರು 2023ರ ಜನವರಿ 27ರ ಆದೇಶದ ಕುರಿತು ಕೆಲವು ಮಾರ್ಪಾಡುಗಳನ್ನು ಮಾಡುವಂತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
1961ರ ವಕೀಲರ ಕಾಯ್ದೆ ಪ್ರಕಾರ ನ್ಯಾಯಾಲಯಕ್ಕೆ ಹಾಜರಾಗುವ ವಕೀಲರು ಕುತ್ತಿಗೆ ಪಟ್ಟಿಯೊಂದಿಗೆ ಬಿಳಿ ಅಂಗಿಯ ಮೇಲೆ ಕಪ್ಪು ಕೋಟ್ ಅಥವಾ ನಿಲುವಂಗಿ ಧರಿಸಬೇಕಾಗುತ್ತದೆ. ಬಾರ್ ಕೌನ್ಸಿಲ್ ಆಫ್ ಇಂಡಿಯಾ ನಿಯಮಗಳಲ್ಲಿ ಸಹ ಇದನ್ನು ಸೂಚಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.