ADVERTISEMENT

ದೆಹಲಿ: ಪೊಲೀಸರ ಜತೆ ಜಟಾಪಟಿ 3ನೇ ದಿನವೂ ವಕೀಲರ ಮುಷ್ಕರ

ಪಿಟಿಐ
Published 6 ನವೆಂಬರ್ 2019, 20:48 IST
Last Updated 6 ನವೆಂಬರ್ 2019, 20:48 IST
ದೆಹಲಿಯ ರೋಹಿಣಿ ನ್ಯಾಯಾಲಯದ ಆವರಣದಲ್ಲಿ ವಕೀಲರು ಬುಧವಾರ ಪ್ರತಿಭಟನೆ ನಡೆಸಿದರು      – ಪಿಟಿಐ ಚಿತ್ರ
ದೆಹಲಿಯ ರೋಹಿಣಿ ನ್ಯಾಯಾಲಯದ ಆವರಣದಲ್ಲಿ ವಕೀಲರು ಬುಧವಾರ ಪ್ರತಿಭಟನೆ ನಡೆಸಿದರು      – ಪಿಟಿಐ ಚಿತ್ರ   

ನವದೆಹಲಿ: ತೀಸ್‌ ಹಜಾರಿ ಕೋರ್ಟ್‌ನಲ್ಲಿ ಶನಿವಾರ (ನ. 2) ಪೊಲೀಸರೊಡನೆ ನಡೆದ ಘರ್ಷಣೆಯ ಘಟನೆಯನ್ನು ಖಂಡಿಸಿ ಸತತ ಮುರನೆಯ ದಿನವೂ ಇಲ್ಲಿನ ಜಿಲ್ಲಾ ನ್ಯಾಯಾಲಯಗಳ ವಕೀಲರು ಪ್ರತಿಭಟನೆ ನಡೆಸಿದರು.

ದೆಹಲಿಯ ಆರೂ ಜಿಲ್ಲಾ ನ್ಯಾಯಾಲಯಗಳ ವಕೀಲರು ಬುಧವಾರವೂ ಕಲಾಪಗಳಿಂದ ದೂರ ಉಳಿದರು. ಪಟಿಯಾಲ ಹೌಸ್‌ ಹಾಗೂ ಸಾಕೇತ್‌ ನ್ಯಾಯಾಲಯದ ಆವರಣದ ಮುಖ್ಯದ್ವಾರವನ್ನೇ ಮುಚ್ಚಿ, ಕಕ್ಷಿದಾರರು ಒಳ ಹೋಗುವುದನ್ನೂ ವಕೀಲರು ತಡೆದರು.

ರೋಹಿಣಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ವಕೀಲರೊಬ್ಬರು ಮೈಮೇಲೆ ಸೀಮೆಎಣ್ಣೆ ಸುರಿದು ಆತ್ಮಾಹುತಿಯ ಪ್ರಯತ್ನ ಮಾಡಿದರು. ಇನ್ನೊಬ್ಬ ವಕೀಲರು ನ್ಯಾಯಾಲಯದ ಕಟ್ಟಡವೊಂದರ ಮೇಲೆ ಏರಿ ಅಲ್ಲಿಂದ ಹಾರುವ ಪ್ರಯತ್ನ ನಡೆಸಿದರು.

ADVERTISEMENT

‘ವಕೀಲರತ್ತ ಗುಂಡುಹಾರಿಸಿದ ಮತ್ತು ಲಾಠಿಚಾರ್ಜ್‌ ನಡೆಸಿದ ಪೊಲೀಸರ ಬಂಧನವಾಗುವವರೆಗೂ ನಾವು ಕಲಾಪಗಳಿಗೆ ಹಾಜರಾಗುವುದಿಲ್ಲ’ ಎಂದು ವಕೀಲರೊಬ್ಬರು ಹೇಳಿದ್ದಾರೆ.

ಪ್ರತಿಭಟನೆ ರಾಜಕೀಯ ಪ್ರೇರಿತ
‘ದೆಹಲಿ ಪೊಲೀಸರು ಮಂಗಳವಾರ ನಡೆಸಿದ ಪ್ರತಿಭಟನೆಯು ರಾಜಕೀಯ ಪ್ರೇರಿತವಾದುದು, ಸ್ವತಂತ್ರ ಭಾರತದ ಇತಿಹಾಸದಲ್ಲೇ ಇದು ಅತ್ಯಂತ ಕರಾಳ ಘಟನೆ’ ಎಂದು ಭಾರತೀಯ ವಕೀಲರ ಸಂಘ ಟೀಕಿಸಿದೆ.

ಸಂಘದ ಅಧ್ಯಕ್ಷ ಮನನ್‌ಕುಮಾರ್‌ ಮಿಶ್ರಾ ಅವರು ಬುಧವಾರ ಮಾಧ್ಯಮಗಳಿಗೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ, ‘ಪ್ರತಿಭಟನೆಯನ್ನು ಕೈಬಿಡುವಂತೆ ಸಂಘವು ವಕೀಲರಿಗೆ ಮನವಿ ಮಾಡಿತ್ತು. ಆದರೆ ಪೊಲೀಸರ ಪ್ರತಿಭಟನೆಯನ್ನು ನೋಡಿದ ಬಳಿಕ ಈ ವಿಚಾರವನ್ನು ಇಲ್ಲಿಗೇ ಬಿಟ್ಟರೆ ಆಗದು ಎಂಬ ಭಾವನೆ ಮೂಡಿದೆ. ಪ್ರತಿಭಟನಾನಿರತ ಪೊಲೀಸರು ಅಶ್ಲೀಲ ಪದಗಳಿಂದ ವಕೀಲರನ್ನು ನಿಂದಿಸಿದ್ದಾರೆ. ವಕೀಲರಿಗೆ ಪ್ರಾಣಬೆದರಿಕೆಯನ್ನೂ ಹಾಕಿದ್ದಾರೆ’ ಎಂದಿದ್ದಾರೆ.

‘ಪೊಲೀಸರ ಈ ಕಾನೂನುಬಾಹಿರ ಪ್ರತಿಭಟನೆಯ ಹಿಂದೆ ಇದ್ದವರು ಯಾರು ಮತ್ತು ಪ್ರತಿಭಟನೆಗೆ ಕರೆ ನೀಡಿದವರು ಯಾರು ಎಂಬ ಬಗ್ಗೆ ತನಿಖೆಯಾಗಬೇಕು. ವಕೀಲರ ಮೇಲೆ ಹಲ್ಲೆ ನಡೆಸಿದ ಪೊಲೀಸರನ್ನು ಒಂದು ವಾರದೊಳಗೆ ಬಂಧಿಸಬೇಕು. ಇಲ್ಲದಿದ್ದಲ್ಲಿ ನಾವು ಶಾಂತಿಯುತ ಧರಣಿ ಆರಂಭಿಸುತ್ತೇವೆ’ ಎಂದು ಅವರು ಹೇಳಿದ್ದಾರೆ.

ವಿವರಣೆ ಅನಗತ್ಯ: ಕೋರ್ಟ್‌
‘ತೀಸ್‌ಹಜಾರಿ ಕೋರ್ಟ್‌ ಘರ್ಷಣೆಯ ಮರುದಿನ (ನ. 3) ನೀಡಿದ ಆದೇಶವು ಸ್ಪಷ್ಟವಾಗಿದೆ. ಅದರ ಬಗ್ಗೆ ಇನ್ನಷ್ಟು ವಿವರಣೆ ನೀಡುವ ಅಗತ್ಯವಿಲ್ಲ’ ಎಂದು ದೆಹಲಿ ಹೈಕೋರ್ಟ್‌ ಬುಧವಾರ ಹೇಳಿದೆ.

ಘಟನೆಗೆ ಸಂಬಂಧಿಸಿದಂತೆ ಯಾವುದೇ ವಕೀಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬಾರದು ಎಂದು ಕೋರ್ಟ್‌ ಆದೇಶ ನೀಡಿತ್ತು. ಈ ಆದೇಶದ ಬಗ್ಗೆ ಇನ್ನಷ್ಟು ಸ್ಪಷ್ಟನೆ ನೀಡಬೇಕು, ತೀಸ್‌ಹಜಾರಿ ನ್ಯಾಯಾಲಯದ ಆವರಣದಲ್ಲಿ ನಡೆದ ಘಟನೆಯನ್ನು ಬಿಟ್ಟು ಉಳಿದ ಘಟನೆಗಳಿಗೆ ಅದನ್ನು ಅನ್ವಯಿಸಬಾರದು ಎಂದು ಕೇಂದ್ರ ಸರ್ಕಾರ ಮಂಗಳವಾರ ಮನವಿ ಮಾಡಿಕೊಂಡಿತ್ತು.

ವಿಡಿಯೊ ಹಂಚಿಕೊಳ್ಳಬೇಡಿ: ‘ವಕೀಲರು ಮತ್ತು ಪೊಲೀಸರ ನಡುವಿನ ಘರ್ಷಣೆಯ ವಿಡಿಯೊಗಳು, ಚಿತ್ರಗಳು ಅಥವಾ ಸಂದೇಶಗಳನ್ನು ಮಾಧ್ಯಮದ ಜೊತೆ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬಾರದು’ ಎಂದು ತೀಸ್‌ ಹಜಾರಿ ಕೋರ್ಟ್‌ನ ನ್ಯಾಯಾಧೀಶರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಈ ಬಗ್ಗೆ ಸುತ್ತೋಲೆ ಹೊರಡಿಸಿರುವ ನ್ಯಾಯಾಧೀಶರು, ‘ಘಟನೆಯ ಬಗ್ಗೆ ಅನಗತ್ಯ ಹೇಳಿಕೆಗಳನ್ನು ನೀಡುವುದಾಗಲಿ, ಹರಟೆ ಮಾತುಗಳನ್ನಾಡುವುದಾಗಲಿ ಮಾಡಬಾರದು. ಈ ವಿಚಾರವಾಗಿ ವದಂತಿಗಳು ಹಬ್ಬದಂತೆ ಎಲ್ಲಾ ಅಧಿಕಾರಿಗಳು ಎಚ್ಚರ ವಹಿಸಬೇಕು’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.