ADVERTISEMENT

ತುರ್ತು ವಿಚಾರಣೆಗೆ ಮೌಖಿಕ ಪ್ರಸ್ತಾಪಕ್ಕೆ ಅವಕಾಶ ಇಲ್ಲ: ಸಿಜೆಐ ಸಂಜೀವ್ ಖನ್ನಾ

ಸಿಜೆಐ ಖನ್ನಾ ಸೂಚನೆ * ವಕೀಲರಿಂದ ಭಿನ್ನ ಪ್ರತಿಕ್ರಿಯೆ

ಪಿಟಿಐ
Published 12 ನವೆಂಬರ್ 2024, 16:08 IST
Last Updated 12 ನವೆಂಬರ್ 2024, 16:08 IST
ನ್ಯಾಯಮೂರ್ತಿ ಸಂಜೀವ್ ಖನ್ನಾ –ಪಿಟಿಐ ಚಿತ್ರ
ನ್ಯಾಯಮೂರ್ತಿ ಸಂಜೀವ್ ಖನ್ನಾ –ಪಿಟಿಐ ಚಿತ್ರ   

ನವದೆಹಲಿ: ಪ್ರಕರಣಗಳನ್ನು ತುರ್ತಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು ಎಂದು ಕೋರ್ಟ್‌ನಲ್ಲಿ ಮೌಖಿಕವಾಗಿ ಪ್ರಸ್ತಾಪಿಸುವಂತೆ ಇಲ್ಲ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಅವರು ನೀಡಿರುವ ನಿರ್ದೇಶನಕ್ಕೆ ವಕೀಲರಿಂದ ಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಸಿಜೆಐ ನೇತೃತ್ವದ ನ್ಯಾಯಪೀಠದ ಮುಂದೆ ಹಾಜರಾಗುವ ವಕೀಲರು, ಕೆಲವು ಪ್ರಕರಣಗಳನ್ನು ತುರ್ತಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು ಎಂದು ಕೋರುತ್ತಾರೆ. ಇದು ಪ್ರತಿದಿನ ಕಲಾಪ ಶುರುವಾಗುವಾಗ ನಡೆಯುತ್ತದೆ. ಆದರೆ, ಈ ಪದ್ಧತಿ ಬೇಡ ಎಂದು ನ್ಯಾಯಮೂರ್ತಿ ಖನ್ನಾ ಅವರು ಮಂಗಳವಾರ ಸೂಚನೆ ನೀಡಿದ್ದಾರೆ.

ತುರ್ತಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕಿರುವ ಪ್ರಕರಣಗಳ ಬಗ್ಗೆ ಇ–ಮೇಲ್ ಮೂಲಕ ಪ್ರಸ್ತಾಪಿಸುವ ಪದ್ಧತಿಯನ್ನು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಸಿಜೆಐ ಆಗಿದ್ದಾಗ ಜಾರಿಗೆ ತಂದಿದ್ದರು. ಆದರೆ, ನ್ಯಾಯಮೂರ್ತಿ ಚಂದ್ರಚೂಡ್ ಅವರು ಮೌಖಿಕವಾಗಿ ಪ್ರಸ್ತಾಪಿಸುವುದಕ್ಕೂ ಅವಕಾಶ ಕಲ್ಪಿಸುತ್ತಿದ್ದ ಕಾರಣ, ಇ–ಮೇಲ್ ಮೂಲಕ ಪ್ರಸ್ತಾಪಿಸುವ ವ್ಯವಸ್ಥೆಯು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ಬಂದಿರಲಿಲ್ಲ.

ADVERTISEMENT

ಮೌಖಿಕವಾಗಿ ಪ್ರಸ್ತಾಪ ಮಾಡುವ ಪ್ರಕ್ರಿಯೆಯು ಸಾಮಾನ್ಯವಾಗಿ ಬೆಳಿಗ್ಗೆ 10.30 ಶುರುವಾಗುತ್ತದೆ. ಇದು ಸರಿಸುಮಾರು ಅರ್ಧ ಗಂಟೆಯವರೆಗೆ ನಡೆಯುತ್ತದೆ. ಹೆಚ್ಚಿನ ಸಂಪನ್ಮೂಲ ಹೊಂದಿರುವ ಕಕ್ಷಿದಾರರು ಹಿರಿಯ ವಕೀಲರನ್ನು ಗೊತ್ತುಮಾಡಿಕೊಂಡು, ತಮ್ಮ ಪ್ರಕರಣಗಳು ನಿಗದಿಯಾದ ಸಮಯಕ್ಕಿಂತ ಮೊದಲೇ ವಿಚಾರಣೆಗೆ ಬರುವಂತೆ ಮಾಡಲು ಈ ವ್ಯವಸ್ಥೆಯನ್ನು ಬಳಸಿಕೊಳ್ಳುವುದೂ ಇದೆ.

ಇನ್ನು ಮುಂದೆ ತುರ್ತಾಗಿ ಕೈಗೆತ್ತಿಕೊಳ್ಳಬೇಕಿರುವ ‍ಪ್ರಕರಣಗಳ ಬಗ್ಗೆ ಇ–ಮೇಲ್ ಮೂಲಕ ಅಥವಾ ಲಿಖಿತ ಅರ್ಜಿಯ ಮೂಲಕವೇ ಪ್ರಸ್ತಾಪಿಸಬೇಕು, ಪ್ರಕರಣವನ್ನು ತುರ್ತಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕಿರುವುದು ಏಕೆ ಎಂಬುದನ್ನು ಸ್ಪಷ್ಟವಾಗಿ ನಮೂದಿಸಬೇಕು.

ಪ್ರಕರಣಗಳ ಬಗ್ಗೆ ಪ್ರಸ್ತಾಪ ಮಾಡುವುದಕ್ಕೆ ಹಾಗೂ ನಿಗದಿತ ಸಮಯಕ್ಕೆ ಮೊದಲೇ ಅವುಗಳ ವಿಚಾರಣೆ ನಡೆಯುವಂತೆ ಮಾಡಲು ಮುಂಚೂಣಿ ವಕೀಲರನ್ನು ಗೊತ್ತುಮಾಡಿಕೊಳ್ಳಲಾಗುತ್ತದೆ. ಅಲ್ಲದೆ, ಕೆಲವು ಸೆಕೆಂಡುಗಳ ಕಾಲ ವಾದ ಮಂಡಿಸಲು ಅವರಿಗೆ ಒಳ್ಳೆಯ ಮೊತ್ತವನ್ನು ಪಾವತಿಸಲಾಗುತ್ತದೆ ಎಂಬ ಮಾತು ಕೂಡ ಇದೆ.

ವಕೀಲರ ಅನಿಸಿಕೆ: ಅತ್ಯಂತ ತುರ್ತಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕಿರುವ ಪ್ರಕರಣಗಳ ಬಗ್ಗೆ ನ್ಯಾಯಪೀಠದ ಗಮನ ಸೆಳೆಯಲು, ಪ್ರಕರಣಗಳನ್ನು ಮೌಖಿವಾಗಿ ಪ್ರಸ್ತಾಪಿಸಲು ಅವಕಾಶ ಇರಬೇಕು ಎಂದು ಸುಪ್ರೀಂ ಕೋರ್ಟ್‌ ವಕೀಲರ ಸಂಘದ ಮಾಜಿ ಅಧ್ಯಕ್ಷ ಹಾಗೂ ಹಿರಿಯ ವಕೀಲ ವಿಕಾಸ್ ಸಿಂಗ್, ಹಿರಿಯ ವಕೀಲರಾದ ಎಚ್.ಎಸ್. ಫೂಲ್ಕಾ, ವಿಜಯ್ ಹನ್ಸಾರಿಯಾ ಅಭಿಪ್ರಾಯಪಟ್ಟಿದ್ದಾರೆ.

ಸಿಜೆಐ ಖನ್ನಾ ಅವರ ತೀರ್ಮಾನವು ಸ್ತುತ್ಯರ್ಹವಾದುದು, ಪ್ರಶಂಸನೀಯವಾದುದು ಎಂದು ಹಿರಿಯ ವಕೀಲ ಸಿದ್ಧಾರ್ಥ ಲೂಥ್ರಾ ಮತ್ತು ವಕೀಲ ಅಶ್ವನಿ ದುಬೆ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.