ನವದೆಹಲಿ: ಪ್ರಧಾನಿಯವರ ಭದ್ರತೆ ವ್ಯವಸ್ಥೆಯಲ್ಲಿ ಗಂಭೀರ ಲೋಪವಾಗಿದೆ ಎಂಬ ಆರೋಪ ಕುರಿತಾದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಲಿದೆ.
ಈ ವಿಚಾರಣೆಯನ್ನು ನಡೆಸುವುದು ಬೇಡವೆಂಬ ಧ್ವನಿ ಸಂದೇಶವೊಂದು ಸುಪ್ರೀಂ ಕೋರ್ಟ್‌ನ ಹಲವು ನ್ಯಾಯವಾದಿಗಳಿಗೆ ಬಂದಿದೆ.
‘ಮೋದಿ ಆಡಳಿತಕ್ಕೆ ಸಹಾಯ ಮಾಡಬೇಡಿ’ ಎಂದು ಹೇಳುವ ಧ್ವನಿ ಸಂದೇಶದೊಂದಿಗೆ ಅಂತರರಾಷ್ಟ್ರೀಯ ಕರೆ ಬಂದಿದೆ ಎಂದು ಸುಪ್ರೀಂ ಕೋರ್ಟ್‌ನ ಹಲವಾರು ವಕೀಲರು ಸೋಮವಾರ ತಿಳಿಸಿದ್ದಾರೆ.
1984ರ ಗಲಭೆಯಲ್ಲಿ ಸಿಖ್ ಸಮುದಾಯದವರ ಹತ್ಯೆಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸಹಾಯ ಮಾಡಲಿಲ್ಲ ಎಂದೂ ಧ್ವನಿ ಸಂದೇಶದಲ್ಲಿ ತಿಳಿಸಲಾಗಿದೆ.
ಈ ವಿಚಾರದ ಕುರಿತು ಎನ್‌ಐಎ ತನಿಖೆ ನಡೆಸಬೇಕೆಂದು ವಕೀಲ ಮಹೇಶ್ ಜೇಠ್ಮಲಾನಿ ಒತ್ತಾಯಿಸಿದ್ದಾರೆ.
ಪ್ರಧಾನ ಮಂತ್ರಿ ಮತ್ತು ಬೆಂಗಾವಲು ಪಡೆಯಿದ್ದ ವಾಹನಗಳು ಇದೇ 5ರಂದು ಪಂಜಾಬ್‌ನ ಫಿರೋಜ್‌ಪುರ್ ಮೇಲ್ಸೇತುವೆಯಲ್ಲಿ 15 ನಿಮಿಷ ಸ್ಥಗಿತವಾಗಿದ್ದವು. ಆಗ ರಸ್ತೆಯಲ್ಲಿ ಪ್ರತಿಭಟನೆ ನಡೆಯುತ್ತಿತ್ತು. ಇದು ಭದ್ರತಾ ವೈಫಲ್ಯದ ಚರ್ಚೆಗೆ ಆಸ್ಪದವಾಗಿತ್ತು.
ಲಾಯರ್ಸ್ ವಾಯ್ಸ್ ಸಂಘಟನೆ ಈ ಬಗ್ಗೆ ಅರ್ಜಿ ಸಲ್ಲಿಸಿದೆ. ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದಲ್ಲಿ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ಹಿಮಾಕೊಹ್ಲಿ ಅವರಿರುವ ಪೀಠ ವಿಚಾರಣೆ ನಡೆಸುವ ಸಾಧ್ಯತೆಯಿದೆ.
ಭದ್ರತಾ ವೈಪಲ್ಯ ಕುರಿತಂತೆ ಸಮಗ್ರ ತನಿಖೆ ನಡೆಸಬೇಕು ಮತ್ತು ಭವಿಷ್ಯದಲ್ಲಿ ಇಂತಹ ಘಟನೆ ಮರುಕಳಿಸದಂತೆ ಕ್ರಮವಹಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.