ಚೆನ್ನೈ: 12 ವರ್ಷದ ಬಾಲಕಿಗೆ ಕಳೆದ ಏಳು ತಿಂಗಳುಗಳಿಂದ ನಿರಂತರ ಕಿರುಕುಳ ನೀಡುತ್ತಿದ್ದ 17 ಮಂದಿ ಆರೋಪಿಗಳಿಗೆ ವಕೀಲರು ಥಳಿಸಿದ ಘಟನೆ ನಡೆದಿದೆ.ಮಂಗಳವಾರ ಚೆನ್ನೈ ಮಹಿಳಾ ನ್ಯಾಯಾಲಯಕ್ಕೆ ಈ ಆರೋಪಿಗಳನ್ನು ಕರೆ ತಂದಾಗ ವಕೀಲರು ಹಿಗ್ಗಾಮುಗ್ಗ ಥಳಿಸಿದ್ದು, ಇದರ ವಿಡಿಯೊ ವೈರಲ್ ಆಗಿದೆ.
ಬಾಲಕಿಗೆ ಕಿರುಕುಳ ನೀಡುತ್ತಿದ್ದ 17 ಮಂದಿಯನ್ನು ಚೆನ್ನೈ ಪೊಲೀಸರು ಸೋಮವಾರ ಬಂಧಿಸಿದ್ದರು.
ಕಳೆದ ಏಳು ತಿಂಗಳಲ್ಲಿ ಈ ಆರೋಪಿಗಳು ಬಾಲಕಿಗೆ ನಿರಂತರ ಕಿರುಕುಳ ನೀಡುತ್ತಿದ್ದರು.ಕಳೆದ ವಾರ ಬಾಲಕಿ ಈ ವಿಷಯವನ್ನು ತನ್ನ ಸಹೋದರಿಗೆ ತಿಳಿಸಿದ್ದು, ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.
ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ತಿಳಿದುಬಂದಿತ್ತು.
ಪೊಲೀಸರ ಪ್ರಕಾರ ಲಿಫ್ಟ್ ಆಪರೇಟರ್ ಆಗಿದ್ದ ವ್ಯಕ್ತಿ ಬಾಲಕಿಗೆ ಕಿರುಕುಳ ನೀಡಿದ್ದಾನೆ. ಆನಂತರ ಆತ ತನ್ನ ಸಹೋದ್ಯೋಗಿ ಮತ್ತು ಗೆಳೆಯರನ್ನು ಕರೆತಂದು ಬಾಲಕಿ ಮೇಲೆ ಒಬ್ಬರ ನಂತರ ಒಬ್ಬರು ಲೈಂಗಿಕ ದೌರ್ಜನ್ಯವೆಸಗಿದ್ದಾರೆ.
ಈ ಪ್ರಕರಣದ ತನಿಖೆ ನಡೆಸುತ್ತಿರುವ ಹಿರಿಯ ಪೊಲೀಸ್ ಅಧಿಕಾರಿಯ ಪ್ರಕಾರ, ಬಾಲಕಿ ಆಕೆಯ ಅಮ್ಮನೊಂದಿಗೆ ವಾಸಿಸುತ್ತಿದ್ದಾಳೆ.ಉದ್ಯಮಿಯಾಗಿರುವ ಈಕೆಯ ಅಪ್ಪ ಮತ್ತು ಅಕ್ಕ ಬೇರೆ ನಗರದಲ್ಲಿದ್ದಾರೆ.ಕಳೆದ ವಾರ ಈಕೆಯ ಅಕ್ಕ ಮನೆಗೆ ಬಂದಾಗ, ತಂಗಿ ಸಿಕ್ಕಾಪಟ್ಟೆ ಬಳಲಿರುವುದನ್ನು ಕಂಡುವಿಷಯ ಏನೆಂದು ಕೇಳಿದ್ದಾಳೆ. ಆಗ ಬಾಲಕಿ ನಡೆದ ಘಟನೆಯನ್ನು ವಿವರಿಸಿದ್ದಳು.ಪೋಷಕರು ದೂರು ನೀಡಿದ ನಂತರ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ.ಆರೋಪಿಗಳು ಸಂತ್ರಸ್ತೆಗೆ ಮಾದಕ ವಸ್ತುವನ್ನೂ ನೀಡಿದ್ದರು.
ಬಾಲಕಿ ಸಂಜೆ ಹೊಚತ್ತು ಅಪಾರ್ಟ್ ಮೆಂಟ್ ಪರಿಸರದಲ್ಲಿ ಆಟವಾಡಲು ಹೋಗಿದ್ದಾಗ ಆಕೆಯ ಮೇಲೆ ದೌರ್ಜನ್ಯ ನಡೆದಿದೆ. ದೌರ್ಜನ್ಯವೆಸಗಿದವರು ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುವವರು ಮತ್ತು ಮನೆಗೆಲಸದವರಾಗಿದ್ದಾರೆ.
ಮಹಿಳಾ ಕೋರ್ಟ್ ನಲ್ಲಿ ಸಂತ್ರಸ್ತೆಯ ಹೇಳಿಕೆಯನ್ನು ರೆಕಾರ್ಡ್ ಮಾಡಲಾಗಿದ್ದು, ಪೋಸ್ಕೊ ಕಾಯ್ದೆಯಡಿ ಆರೋಪಿಗಳ ಮೇಲೆ ಕೇಸು ದಾಖಲಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.