ನವದೆಹಲಿ: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ದೆಹಲಿ ಸಾರಿಗೆ ನಿಗಮದ (ಡಿಟಿಸಿ) ಬಸ್‌ನಲ್ಲಿ ಬುಧವಾರ ಸಂಚರಿಸಿದರು. ಇಲ್ಲಿನ ಸರೋಜಿನಿ ನಗರ ಬಸ್ ಡಿಪೋದಲ್ಲಿ ಚಾಲಕರು, ನಿರ್ವಾಹಕರು ಮತ್ತು ಮಾರ್ಷಲ್‌ಗಳೊಂದಿಗೆ ಸಂವಹನ ನಡೆಸಿ, ಅವರ ಸಮಸ್ಯೆಗಳನ್ನು ಆಲಿಸಿದರು.
ಪ್ರಯಾಣ ಹಾಗೂ ಸಂವಹನದ ವೇಳೆ ತೆಗೆದ ಕೆಲವು ಚಿತ್ರಗಳನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ಅವರು, 'ದೆಹಲಿಯಲ್ಲಿ ಚಾಲಕರು ಹಾಗೂ ನಿರ್ವಾಹಕ ಸಹೋದರರು ಮತ್ತು ಬಸ್ ಮಾರ್ಷಲ್‌ಗಳೊಂದಿಗೆ ಮಾತುಕತೆ ನಡೆಸಿದೆ. ಬಳಿಕ, ಡಿಟಿಸಿ ಬಸ್‌ನಲ್ಲಿ ಪ್ರಯಾಣಿಸಿದೆ. ಪ್ರೀತಿ ಪಾತ್ರರೊಂದಿಗೆ ಅವರ ಸಮಸ್ಯೆಗಳ ಕುರಿತು ಚರ್ಚಿಸಿದೆ' ಎಂದು ತಿಳಿಸಿದ್ದಾರೆ.
ಈ ಚಿತ್ರಗಳನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೂ ಹಂಚಿಕೊಂಡಿದ್ದಾರೆ.
ಎಕ್ಸ್/ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿರುವ ಅವರು, 'ಸಾರ್ವಜನಿಕ ಸೇವೆಯಲ್ಲಿರುವ ಸಾವಿರಾರು ಬಸ್‌ಗಳನ್ನು ಹೊಂದಿರುವ ಸಾರಿಗೆ ನಿಗಮವನ್ನು ಮುನ್ನಡೆಸುತ್ತಿರುವ ಚಾಲಕರು, ಕಂಡಕ್ಟರ್‌ಗಳು ಮತ್ತು ಮಾರ್ಷಲ್‌ಗಳು ತಮ್ಮ ಕುಟುಂಬಗಳನ್ನು ಹೇಗೆ ನಿರ್ವಹಿಸುತ್ತಿದ್ದಾರೆ? ಹಣದುಬ್ಬರ, ಶಾಲಾ ಶುಲ್ಕ ಏರಿಕೆ, ವೇತನ, ಪಿಂಚಣಿ ಇತ್ಯಾದಿ ಒತ್ತಡಗಳ ನಡುವೆ ಜೀವನ ನಿರ್ವಹಣೆ ಹೇಗೆ ಮಾಡುತ್ತಿದ್ದಾರೆ?' ಎಂದು ಹಿಂದಿಯಲ್ಲಿ ಕೇಳಿದ್ದಾರೆ.
ಮುಂದುವರಿದು, 'ದೇಶದಲ್ಲಿ ಇಂತಹ ಕೋಟ್ಯಂತರ ಧ್ವನಿಗಳಿವೆ. ಅವರನ್ನೆಲ್ಲ ಅತ್ಯಂತ ಕೆಟ್ಟ ಆರ್ಥಿಕ ಪರಿಸ್ಥಿತಿಯಲ್ಲಿ ಜೀವನ ಸಾಗಿಸುವಂತೆ ಮಾಡಲಾಗಿದೆ. ಅವರ ಮನಸ್ಸಿನ ಮಾತುಗಳನ್ನು ಕೇಳಿಸಿಕೊಳ್ಳುವುದು ಮುಖ್ಯವಾಗಿದೆ. ರಾಹುಲ್ ಗಾಂಧಿ ನಿರಂತರವಾಗಿ ಆ ಕೆಲಸ ಮಾಡುತ್ತಿದ್ದಾರೆ. ಅವರಿಗೆ ನ್ಯಾಯ ಒದಗಿಸಲು ಧ್ವನಿ ಎತ್ತುತ್ತಿದ್ದಾರೆ' ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.