ADVERTISEMENT

ಚೆನ್ನೈ: ಎಂಜಿಆರ್‌‌ಗೆ ಮೂತ್ರಪಿಂಡ ದಾನ ಮಾಡಿದ್ದ ಲೀಲಾವತಿ ನಿಧನ

ಐಎಎನ್ಎಸ್
Published 26 ನವೆಂಬರ್ 2021, 11:50 IST
Last Updated 26 ನವೆಂಬರ್ 2021, 11:50 IST
ದಿವಂಗತ ಎಂ.ಜಿ.ರಾಮಚಂದ್ರನ್‌ (ಎಂಜಿಆರ್‌)
ದಿವಂಗತ ಎಂ.ಜಿ.ರಾಮಚಂದ್ರನ್‌ (ಎಂಜಿಆರ್‌)    

ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ನಟ, ಮಾಜಿ ಮುಖ್ಯಮಂತ್ರಿ ದಿವಂಗತ ಎಂ.ಜಿ.ರಾಮಚಂದ್ರನ್‌ (ಎಂಜಿಆರ್‌) ಅವರಿಗೆ ಮೂತ್ರಪಿಂಡ ದಾನ ಮಾಡಿದ್ದ ಎಂಜಿಸಿ ಲೀಲಾವತಿ (72) ಅವರು ಚೆನ್ನೈನಲ್ಲಿ ನಿಧನರಾದರು.

ಎಂಜಿಆರ್‌ ಅವರು ಮೂತ್ರಪಿಂಡ ವೈಫಲ್ಯದಿಂದ ಬ್ರೂಕ್ಲಿನ್‌ ಆಸ್ಪತ್ರೆಗೆ ದಾಖಲಾಗಿದ್ದಾಗ, ಅವರ ಅಣ್ಣನ ಮಗಳು ಲೀಲಾವತಿ ಮೂತ್ರಪಿಂಡ ದಾನ ಮಾಡಿದ್ದರು. ಎಂಜಿಆರ್‌ ಅವರ ಅಣ್ಣ ಎಂ.ಜಿ.ಚಕ್ರಪಾಣಿ ಅವರ ಮಗಳು ಲೀಲಾವತಿ.

ಎಂಜಿಆರ್‌ ಅವರು ಮೂತ್ರಪಿಂಡದ ವೈಫಲ್ಯದಿಂದ ಅಮೆರಿಕದಲ್ಲಿನ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯ ರವೀಂದ್ರನಾಥ್‌ ಅವರನ್ನು ವಿವಾಹವಾಗಿದ್ದ ಲೀಲಾವತಿ ಅವರು ಆಗ, ಕೇರಳದ ತ್ರಿಶ್ಯೂರ್‌ನ ಚೇಳಕ್ಕರದಲ್ಲಿ ವಾಸವಾಗಿದ್ದರು. ಎಂಜಿಆರ್‌ ಅವರ ಅನಾರೋಗ್ಯದ ಕುರಿತು ವಿಷಯ ತಿಳಿಯುತ್ತಿದ್ದಂತೆ ಚೆನ್ನೈಗೆ ತೆರಳಿದ್ದ ಲೀಲಾವತಿ, ಮೂತ್ರಪಿಂಡ ದಾನ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದರು. ಅನಂತರ ಅಮೆರಿಕದ ಬ್ರೂಕ್ಲಿನ್‌ನಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು.

ADVERTISEMENT

ಎಂಜಿಆರ್‌ ಅವರು 1987ರ ಡಿಸೆಂಬರ್‌ 24ರಂದು ಚೆನ್ನೈನಲ್ಲಿ ನಿಧನರಾದರು.

1989ರಿಂದ ಲೀಲಾವತಿ ಅವರು ಚೆನ್ನೈನಲ್ಲಿ ವಾಸಿಸುತ್ತಿದ್ದರು. ಅವರ ಸೋದರ ಎಂಜಿಸಿ ಸುಕುಮಾರ್‌ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅವರ ಮತ್ತೊಬ್ಬ ಸೋದರ ರಾಜೇಂದ್ರನ್‌ ಅವರ ಮಗ, ಎಂಸಿಆರ್‌ ಪ್ರವೀಣ್‌ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಲೀಲಾವತಿ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

'ಅನಾರೋಗ್ಯ ಪೀಡಿತರಾಗಿದ್ದ ಲೀಲಾವತಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಯ ನಂತರ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು ಹಾಗೂ ಮನೆಗೆ ಮರಳಿದ್ದರು. ಆದರೆ, ಮತ್ತೆ ಆರೋಗ್ಯ ಸ್ಥಿತಿ ಗಂಭೀರವಾಗಿ ಗುರುವಾರ ರಾತ್ರಿ ನಿಧನರಾದರು' ಎಂದು ಎಂಜಿಸಿ ರಾಜೇಂದ್ರನ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.