ಮುಂಬೈ: ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷವನ್ನು ಸೇರ್ಪಡೆಯಾಗಿರುವುದು 'ಉತ್ತಮ ಅವಕಾಶ' ಪಡೆಯುವ ಸಲುವಾಗಿ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ್ ಚವ್ಹಾಣ್ ಬುಧವಾರ ಹೇಳಿದ್ದಾರೆ.
ದಶಕಗಳಿಂದ ತಮ್ಮ ಕುಟುಂಬದೊಂದಿಗೆ ಇದ್ದ ಪಕ್ಷವನ್ನು ತೊರೆದಿದ್ದೀರಿ ಎಂದ ಮಾಧ್ಯಮದವರಿಗೆ, 'ಆಗಿದ್ದು ಆಯಿತು. ಇದೀಗ ದೇಶದ ಮನಸ್ಥಿತಿಯೊಂದಿಗೆ ಮುನ್ನಡೆಯುವ ಸಲುವಾಗಿ ಬಿಜೆಪಿ ಸೇರಿದ್ದೇನೆ' ಎಂದು ಪ್ರತಿಕ್ರಿಯಿಸಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಗೆದ್ದು ಮುಖ್ಯಮಂತ್ರಿಯಾಗಿದ್ದ ಚವ್ಹಾಣ್, 'ನಾನು ಅಲ್ಲಿ (ಬಿಜೆಪಿಯಲ್ಲಿ) ಉತ್ತಮ ಅವಕಾಶಗಳಿವೆ ಎಂದು ಭಾವಿಸಿದ್ದೇನೆ. ಬೇರೆ ಇನ್ಯಾವ ಕಾರಣಗಳು ಇರಲು ಸಾಧ್ಯ' ಎಂದು ಕೇಳಿದ್ದಾರೆ. ಮುಂದುವರಿದು, 'ಜನರ ತುಡಿತವನ್ನು ಅರಿಯುವುದು ಅಗತ್ಯ. ದೇಶದ ಜನರ ಮನಸ್ಥಿತಿ ಬಿಜೆಪಿ ಪರವಾಗಿ ಇದೆ ಎಂದುಕೊಂಡಿದ್ದೇನೆ. ಹಾಗಾಗಿ, ನಾನೂ ಜನರ ಮನಸ್ಥಿತಿಯೊಂದಿಗೆ ಹೋಗಲು ನಿರ್ಧರಿಸಿದ್ದೇನೆ' ಎಂದು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿಗೆ ಸೇರಿದ ಮರುದಿನವೇ ಚವ್ಹಾಣ್ ಅವರನ್ನು, ರಾಜ್ಯಸಭೆ ಚುನಾವಣೆ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ. ರಾಜ್ಯಸಭೆ ಟಿಕೆಟ್‌ಗಾಗಿ ಕೇಸರಿ ಪಕ್ಷವನ್ನು ಸೇರಿದ್ದೀರಾ ಎಂದು ಮಾಧ್ಯಮದವರು ಕೇಳಿದ್ದಕ್ಕೆ, 'ವಿಧಾನಸಭೆ ಚುಣಾವಣೆಗೆ ಸುರಕ್ಷಿತ ಕ್ಷೇತ್ರವನ್ನೇ ಹೊಂದಿದ್ದೇನೆ. ಅಲ್ಲಿ ಸಾಕಷ್ಟು ಬಾರಿ ಗೆದ್ದಿದ್ದೇನೆ' ಎಂದು ಪ್ರತಿಕ್ರಿಯಿಸಿದ್ದಾರೆ.
ಭಾಕೊರ್ ವಿಧಾನಸಭೆ ಕ್ಷೇತ್ರ ಪ್ರತಿನಿಧಿಸುತ್ತಿದ್ದ ಚವ್ಹಾಣ್, 2009, 2014 ಹಾಗೂ 2019ರಲ್ಲಿ ಸತತವಾಗಿ ಜಯ ಗಳಿಸಿದ್ದರು.
ಕಳೆದ ಲೋಕಸಭೆ ಚುನಾವಣೆಯಲ್ಲಿ ನಾಂದೇಡ್ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.