ADVERTISEMENT

ದೇಶದ ಸಮಸ್ಯೆ ಮರೆಮಾಚಲು ಹಿಂದಿ ಹೇರಿಕೆ: ಪಿಣರಾಯಿ ವಿಜಯನ್

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆರೋಪ * ಅಮಿತ್ ಶಾ ಹೇಳಿಕೆ ವಿರುದ್ಧ ನಿಲ್ಲದ ಆಕ್ರೋಶ, ಸಮರ್ಥನೆಗೆ ನಿಂತ ರಾಜ್ಯ ಬಿಜೆಪಿ ನಾಯಕರು

ಪಿಟಿಐ
Published 15 ಸೆಪ್ಟೆಂಬರ್ 2019, 20:32 IST
Last Updated 15 ಸೆಪ್ಟೆಂಬರ್ 2019, 20:32 IST
ಪಿಣರಾಯಿ ವಿಜಯನ್
ಪಿಣರಾಯಿ ವಿಜಯನ್   

ತಿರುವನಂತಪುರ: ‘ದೇಶದಲ್ಲಿ ವಿವಾದವನ್ನು ಹುಟ್ಟು ಹಾಕುವ ಉದ್ದೇಶದಿಂದಲೇಹಿಂದಿ ಹೇರಿಕೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ದೇಶದಲ್ಲಿರುವ ಈಗಿನ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ತಿರುಗಿಸುವುದಕ್ಕಾಗಿ ಕೇಂದ್ರ ಸರ್ಕಾರವು ಈ ವಿವಾದವನ್ನು ಅತ್ಯಂತ ಯೋಜಿತವಾಗಿ ಸೃಷ್ಟಿಸಿದೆ’ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆರೋಪಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ‘ಒಂದು ದೇಶ, ಒಂದು ಭಾಷೆ’ಗೆ ಪ್ರತಿಯಾಗಿ ವಿಜಯನ್ ಫೇಸ್‌ಬುಕ್‌ ಬರಹದಲ್ಲಿ ಈ ಆರೋಪ ಮಾಡಿದ್ದಾರೆ.

ದೇಶದಲ್ಲಿ ಈಗ ಸಾಕಷ್ಟು ಸಮಸ್ಯೆಗಳಿವೆ. ಆ ಸಮಸ್ಯೆಗಳನ್ನು ಮರೆಮಾಚಲು ಹಿಂದಿ ಹೇರಿಕೆಯನ್ನು ಕೇಂದ್ರ ಸರ್ಕಾರ ಬಳಸಿಕೊಳ್ಳುತ್ತಿದೆ ಎಂದು ಅವರು ಆಪಾದಿಸಿದ್ದಾರೆ.

ADVERTISEMENT

‘ಹಿಂದಿ ಭಾಷೆಯು ದೇಶವನ್ನು ಒಗ್ಗೂಡಿಸುತ್ತದೆ ಎಂಬ ಪ್ರತಿಪಾದನೆಯೇ ಅಸಂಬದ್ಧ. ದೇಶದ ಬಹುಪಾಲು ಜನರ ಮಾತೃಭಾಷೆ ಹಿಂದಿ ಅಲ್ಲ. ಆ ಜನರ ಮೇಲೆ ಹಿಂದಿ ಹೇರುವುದು, ಅವರನ್ನು ಗುಲಾಮರನ್ನಾಗಿ ಮಾಡಿಕೊಳ್ಳುವ ಹುನ್ನಾರವಾಗಿದೆ. ಶಾ ಅವರ ಈ ಹೇಳಿಕೆಯು ಹಿಂದಿಯೇತರ ಭಾಷಿಕರ ಮೇಲಿನ ಯುದ್ಧಘೋಷವಾಗಿದೆ’ ಎಂದು ಅವರು ಕಿಡಿಕಾರಿದ್ದಾರೆ.

‘ಕೋಟ್ಯಂತರ ಜನ ಹಿಂದಿಯನ್ನು ದಿನಬಳಕೆಯ ಭಾಷೆಯನ್ನಾಗಿ ಮಾತನಾಡುತ್ತಾರೆ. ಆದರಿಂದ ಸಮಸ್ಯೆ ಇಲ್ಲ. ಆದರೆ ಸರ್ಕಾರದ ನಡೆಯಿಂದ ಸಮಸ್ಯೆ ಸೃಷ್ಟಿಯಾಗುತ್ತಿದೆ. ಹಿಂದಿ ಕಾರ್ಯಸೂಚಿಯಿಂದ ಹಿಂದೆ ಸರಿಯಲು ಶಾ ಸಿದ್ಧರಿಲ್ಲ. ಅದನ್ನು ಅವರ ಮಾತೇ ಸ್ಪಷ್ಟಪಡಿಸುತ್ತದೆ. ಹಿಂದಿ ಹೇರಿಕೆಯ ಮೂಲಕ ಗದ್ದಲ ಉಂಟು ಮಾಡುವ ಸಂಘ ಪರಿವಾರದ ಕಾರ್ಯಸೂಚಿಯನ್ನು ಶಾ ಅವರ ಈ ಮಾತು ಬಹಿರಂಗಪಡಿಸಿದೆ’ ಎಂದು ವಿಜಯನ್ ಆರೋಪಿಸಿದ್ದಾರೆ.

**

* ದೇಶದ ಜನಸಂಖ್ಯೆಯಲ್ಲಿ ಅರ್ಧ ಭಾಗಕ್ಕಿಂತ ಕಡಿಮೆ ಜನ ಮಾತ್ರ ಹಿಂದಿಯನ್ನು ದೈನಂದಿನ ವ್ಯವಹಾರಗಳಲ್ಲಿ ಬಳಸುತ್ತಾರೆ. ಹಿಂದಿಯನ್ನು ಪ್ರಾಥಮಿಕ ಭಾಷೆಯನ್ನಾಗಿ ಬಳಸುವವರ ಪ್ರಮಾಣ ಕಡಿಮೆ ಇದೆ

* ಹಿಂದಿ ಭಾಷಿಕ ರಾಜ್ಯಗಳಲ್ಲಿ ಶೇಕಡಾ ಐವತ್ತಕ್ಕಿಂತಲೂ ಹೆಚ್ಚು ಜನ ದೈನಂದಿನ ವ್ಯವಹಾರಗಳಲ್ಲಿ ಹಿಂದಿಯನ್ನು ಬಳಸುತ್ತಾರೆ

* ಈಶಾನ್ಯ ಭಾರತದ ರಾಜ್ಯಗಳಲ್ಲಿ, ದಕ್ಷಿಣ ಭಾರತದ ರಾಜ್ಯಗಳಲ್ಲಿ, ಪೂರ್ವದ ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ಹಿಂದಿಯನ್ನು ಪ್ರಾಥಮಿಕ ಭಾಷೆಯಾಗಿ ಬಳಸುವವರ ಪ್ರಮಾಣ ಅತ್ಯಂತ ಕಡಿಮೆ ಇದೆ. ಈ ರಾಜ್ಯಗಳಲ್ಲಿ ಹಿಂದಿಯನ್ನು ವ್ಯಾವಹಾರಿಕ ಭಾಷೆಯಾಗಿ ಬಳಸುವವರ ಪ್ರಮಾಣವೂ ಕಡಿಮೆ ಇದೆ

**

52.83 ಕೋಟಿ -ದೇಶದಾದ್ಯಂತ ಹಿಂದಿಯನ್ನು ಪ್ರಥಮ ಭಾಷೆಯಾಗಿ ಮತ್ತು ಎರಡು ಅಥವಾ ಮೂರನೇ ಭಾಷೆಯನ್ನಾಗಿ ಬಳಸುವ ಜನರ ಸಂಖ್ಯೆ

ಶೇ 3.63 – ದೇಶದಾದ್ಯಂತ ಹಿಂದಿಯನ್ನು ಪ್ರಥಮ ಭಾಷೆಯಾಗಿ ಮತ್ತು ಎರಡು ಅಥವಾ ಮೂರನೇ ಭಾಷೆಯನ್ನಾಗಿ ಬಳಸುವ ಜನರ ಪ್ರಮಾಣ

ಶೇ 26ದೇಶದಾದ್ಯಂತ ಹಿಂದಿಯನ್ನು ಪ್ರಥಮ ಭಾಷೆಯಾಗಿ ಬಳಸುವ ಜನರ ಪ್ರಮಾಣ

ಆಧಾರ: 2011ರ ಜನಗಣತಿ ವರದಿ

**

ಹಿಂದಿ ಮಾತನಾಡಲು ಬಾರದವರು ತಲೆಕೆಡಿಸಿಕೊಳ್ಳಬೇಕಿಲ್ಲ. ಅಂತಹವರು ತಾವು ಭಾರತೀಯರೇ ಅಲ್ಲ ಎಂದು ಭಾವಿಸುವ ಅಗತ್ಯವೂ ಇಲ್ಲ
– ಪಿಣರಾಯಿ ವಿಜಯನ್, ಕೇರಳ ಮುಖ್ಯಮಂತ್ರಿ

**

ಒಂದು ದೇಶ, ಒಂದು ಭಾಷೆ ಮತ್ತು ಒಂದು ಸಂಸ್ಕೃತಿ ಎನ್ನುವ ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕಾರ್ಯಸೂಚಿಯನ್ನು ನಾವು ಪ್ರಬಲವಾಗಿ ವಿರೋಧಿಸುತ್ತೇವೆ
– ಸಿಪಿಎಂ ಪ್ರಕಟಣೆ

**

ಕೇಂದ್ರ ಸರ್ಕಾರವು ನಿರಂಕುಶವಾಗಿ ಹಿಂದಿಯನ್ನು ಹೇರುತ್ತಿದೆ. ಕೇಂದ್ರದ ಈ ನಡೆಯ ವಿರುದ್ಧ ವಿರೋಧ ಪಕ್ಷಗಳೆಲ್ಲಾ ಒಟ್ಟಾಗಿ ಪ್ರತಿಭಟನೆ ಸಂಘಟಿಸಬೇಕು
– ಎಂ.ಕೆ.ಸ್ಟಾಲಿನ್,ಡಿಎಂಕೆ ಮುಖ್ಯಸ್ಥ

**

ನಾವು ಕನ್ನಡಿಗರು. ಕನ್ನಡಾಭಿಮಾನಿಗಳು. ನಮ್ಮ ಭಾಷೆಯ ಮೇಲೆ ಪ್ರಹಾರ ಮಾಡಿದರೆ ಸುಮ್ಮನೆ ಇರುವುದಿಲ್ಲ
– ಜೆ.ಸಿ.ಮಾಧುಸ್ವಾಮಿ, ಸಚಿವ

**

ಎಲ್ಲರೂ ಹಿಂದಿ ಕಲಿಯಲಿ ಎಂಬರ್ಥದಲ್ಲಿ ಅಮಿತ್ ಶಾ ಮಾತನಾಡಿದ್ದಾರೆ. ಅವರ ಹೇಳಿಕೆಯನ್ನು ವಿವಾದ ಮಾಡುವ ಅವಶ್ಯಕತೆ ಇಲ್ಲ
– ಪ್ರಹ್ಲಾದ ಜೋಷಿ, ಕೇಂದ್ರ ಸಚಿವ

**

ಅಮಿತ್ ಶಾ ಅವರು ಕನ್ನಡ ವಿರೋಧಿ ಅಲ್ಲ. ಅವರ ಮಾತಿನಲ್ಲಿ ಹಿಂದಿ ಹೇರಿಕೆಯ ಉದ್ದೇಶವೂ ಇರಲಿಲ್ಲ. ತ್ರಿಭಾಷಾ ಸೂತ್ರಕ್ಕೆ ನಮ್ಮ ಒಪ್ಪಿಗೆ ಇದೆ
– ಡಿ.ವಿ.ಸದಾನಂದಗೌಡ,ಕೇಂದ್ರ ಸಚಿವ

**

ಒಂದು ದೇಶ, ಒಂದು ಭಾಷೆ ಜಾರಿ ಸಾಧ್ಯವೇ ಇಲ್ಲ. ನಾನು ಮೂರು ಭಾಷೆ ಮಾತನಾಡುತ್ತೇನೆ. ನಮ್ಮ ಸಂಸ್ಕೃತಿ, ಸಂಸ್ಕಾರ ಅಡಗಿರುವುದೇ ನಮ್ಮ ಭಾಷೆಗಳಲ್ಲಿ
– ಜೈರಾಂ ರಮೇಶ್‌, ರಾಜ್ಯಸಭಾ ಸದಸ್ಯ‌

**

ಭಾರತೀಯರೆಲ್ಲರೂ ಒಂದೇ ಎಂದು ಶಾ ತಮ್ಮ ಭಾವನೆ ವ್ಯಕ್ತಪಡಿಸಿದ್ದಾರೆ. ಈ ಹೇಳಿಕೆ ಪರ, ವಿರೋಧ ಅಭಿಪ್ರಾಯಗಳಿದ್ದರೆ ರಚನಾತ್ಮಕ ಚರ್ಚೆಯಾಗಲಿ
– ಜಗದೀಶ್ ಶೆಟ್ಟರ್, ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.