ನವದೆಹಲಿ: ‘ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ಪ್ರತಿಸ್ಪರ್ಧಿ ರಾಜಕೀಯ ಸಂಘಟನೆಗಳ ಪ್ರಾತಿನಿಧ್ಯ ಹೆಚ್ಚಿದ್ದು, ಎಡಪಕ್ಷಗಳು ದುರ್ಬಲಗೊಂಡಿವೆ. ಚುನಾವಣೆಯಲ್ಲಿ ಸ್ವತಂತ್ರವಾಗಿ ಗೆಲ್ಲಲಾಗದೆ, ಇನ್ನಿತರ ಸಂಘಟನೆಗಳೊಂದಿಗೆ ಕೈಜೋಡಿಸುತ್ತಿವೆ’ ಎಂದು ವಿಶ್ವವಿದ್ಯಾಲಯದ ಕುಲಪತಿ ಶಾಂತಿಶ್ರೀ ಡಿ. ಪಂಡಿತ್ ಹೇಳಿದ್ದಾರೆ.
‘ನಾನು ಈ ಹಿಂದೆ ಇಲ್ಲಿನ ವಿದ್ಯಾರ್ಥಿಯಾಗಿದ್ದಾಗ, ಯಾವುದೇ ರಾಜಕೀಯ ಪಕ್ಷಕ್ಕೆ ಸಂಬಂಧಿಸದ ‘ತಟಸ್ಥ’ ವಿದ್ಯಾರ್ಥಿಗಳ’ ಸಂಘಟನೆಯಾದ ಫ್ರೀ ಥಿಂಕರ್ಸ್ ಗುಂಪಿನ ಪ್ರತಿನಿಧಿಯಾಗಿ ಎಡ ಪಕ್ಷಗಳ ವಿರುದ್ಧ ಸ್ಪರ್ಧಿಸುತ್ತಿದ್ದೆ’ ಎಂದಿದ್ದಾರೆ.
‘ಈಚೆಗಷ್ಟೇ ನಡೆದ ಜೆಎನ್‌ಯು ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಸುಮಾರು 1,500 ನೋಟಾ ಮತಗಳು ಚಲಾವಣೆಯಾಗಿವೆ. ಇದು ವಿದ್ಯಾರ್ಥಿಗಳು ಎಡ ಅಥವಾ ಬಲದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿಲ್ಲ ಎಂಬುದನ್ನು ಬಿಂಬಿಸಿದೆ’ ಎಂದು ಪಿಟಿಐ ಸಂಪಾದಕರಿಗೆ ನೀಡಿದ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ.
‘ಒಂದು ಕಾಲದಲ್ಲಿ ಜೆಎನ್‌ಯು ಕ್ಯಾಂಪಸ್ ಎಡಪಂಥೀಯ ಸಂಘಟನೆಗಳ ಪ್ರಾಬಲ್ಯ ಹೊಂದಿತ್ತು. ಆದರೆ, ಇದೀಗ ಬದಲಾದ ಕಾಲಘಟ್ಟದಲ್ಲಿ ಆರ್‌ಎಸ್‌ಎಸ್‌ನ ಅಂಗಸಂಸ್ಥೆ ಎಬಿವಿಪಿ, ಕಾಂಗ್ರೆಸ್ ಬೆಂಬಲಿತ ಎನ್‌ಎಸ್‌ಯುಐ, ಆರ್‌ಜೆಡಿ ಸೇರಿದಂತೆ ಇನ್ನಿತರೆ ಪಕ್ಷಗಳ ರಾಜಕೀಯ ಸಂಘಟನೆಗಳು ನೆಲೆ ಕಂಡುಕೊಂಡಿವೆ’ ಎಂದರು.
‘ಅಖಿಲ ಭಾರತ ವಿದ್ಯಾರ್ಥಿ ಸಂಘ (ಎಐಎಸ್‌ಎ), ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಫೆಡೆರೇಷನ್ (ಡಿಎಸ್‌ಎಫ್), ಸ್ಟೂಡೆಂಟ್ಸ್ ಫೆಡರೇಷನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಹಾಗೂ ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್ (ಎಐಎಸ್‌ಎಫ್) ಒಳಗೊಂಡ ಎಡಪಂಥೀಯ ಸಂಘಟನೆಗಳ ಒಕ್ಕೂಟವು ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಎಪಿಎಸ್‌ಎ ಜೊತೆ ಚುನಾವಣೆಗೆ ಸ್ಪರ್ಧಿಸಿ, ತನ್ನ ಪ್ರತಿಸ್ಪರ್ಧಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಅಭ್ಯರ್ಥಿಗಳನ್ನು ಸೋಲಿಸಿದೆ’ ಎಂದು ಅವರು ಹೇಳಿದರು.
‘ವಿದ್ಯಾರ್ಥಿ ಸಂಘಟನೆಯ ಚುಕ್ಕಾಣಿ ಎಬಿವಿಪಿ ತೆಕ್ಕೆಗೆ ಹೋಗುವುದನ್ನು ತಡೆಯಲಿಕ್ಕಾಗಿಯೇ ಎಡಪಂಥೀಯ ಸಂಘಟನೆಗಳು ಒಟ್ಟಾಗಿ ಸ್ಪರ್ಧಿಸಿದ್ದವು. ಕೊನೆಯ ಕ್ಷಣದಲ್ಲಿ ಬಿಎಪಿಎಸ್‌ಎ ಅಭ್ಯರ್ಥಿಯನ್ನು ಬೆಂಬಲಿಸಿದವು. ಈ ಹಿಂದೆ ಎಸ್‌ಎಫ್‌ಐ, ಎಐಎಸ್‌ಎಫ್ ಸ್ವತಂತ್ರವಾಗಿ ಸ್ಪರ್ಧಿಸುತ್ತಿದ್ದವು. ಇದೀಗ ಗೆಲ್ಲಲಿಕ್ಕಾಗಿ ಎಡಪಕ್ಷಗಳು 10–12 ಗುಂಪುಗಳ ಮೈತ್ರಿಯನ್ನು ಹೊಂದಬೇಕಿದೆ. ಕ್ಯಾಂಪಸ್‌ನಲ್ಲಿ ಎಡಪಂಥವು ದುರ್ಬಲಗೊಳ್ಳುತ್ತಿದೆ’ ಎಂದು ಶಾಂತಿಶ್ರೀ ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.