ADVERTISEMENT

MSPಗೆ ಕಾನೂನು ಖಾತರಿ: ಖಜಾನೆಗೆ ಹೊರೆಯಾಗುತ್ತದೆ ಎನ್ನುವುದು ಸುಳ್ಳು– ರಾಹುಲ್‌

ಪಿಟಿಐ
Published 20 ಫೆಬ್ರುವರಿ 2024, 6:02 IST
Last Updated 20 ಫೆಬ್ರುವರಿ 2024, 6:02 IST
<div class="paragraphs"><p>ರಾಹುಲ್‌ ಗಾಂಧಿ</p></div>

ರಾಹುಲ್‌ ಗಾಂಧಿ

   

ನವದೆಹಲಿ: ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ)ಗೆ ಕಾನೂನಿನ ಖಾತರಿ ನೀಡುವುದರಿಂದ ಸರ್ಕಾರದ ಖಜಾನೆಗೆ ಹೊರೆಯಾಗುವುದಿಲ್ಲ. ಬದಲಿಗೆ ರೈತರಿಂದ ದೇಶದ ಜಿಡಿಪಿ ಬೆಳವಣಿಗೆಯಾತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.

ಈ ಕುರಿತಂತೆ ಎಕ್ಸ್‌ನಲ್ಲಿ ಬರೆದುಕೊಂಡಿರುವ ರಾಹುಲ್‌, ‘ಎಂಎಸ್‌ಪಿಗೆ ಕಾನೂನಿನ ಖಾತರಿ ನೀಡುವುದು ಕಾರ್ಯಸಾಧುವಲ್ಲ ಎಂಬ ಸುಳ್ಳನ್ನು ಮೋದಿ ಬೆಂಬಲಿತ ಮಾಧ್ಯಮಗಳಿಂದ ಹರಡಲಾಗುತ್ತಿದೆ’ ಎಂದು ಕಿಡಿಕಾರಿದರು.

ADVERTISEMENT

‘ಈ ವಿಷಯದಲ್ಲಿ ಸುಳ್ಳು ಏನೆಂದರೆ ಭಾರತ ಸರ್ಕಾರದ ಬಜೆಟ್‌ನಲ್ಲಿ ಎಂಎಸ್‌ಪಿಗೆ ಕಾನೂನು ಖಾತರಿ ನೀಡುವುದು ಕಾರ್ಯಸಾಧ್ಯವಲ್ಲ. ಸತ್ಯವೆಂದರೆ ಸಿಆರ್‌ಐಎಸ್‌ಐಎಲ್‌ ಪ್ರಕಾರ ಎಂಎಸ್‌ಪಿಗೆ ಕಾನೂನಿನ ಖಾತರಿ ನೀಡಿದರೆ ₹21,000 ಕೋಟಿ ಹೆಚ್ಚುವರಿ ಹೊರೆ ಬೀಳುತ್ತದೆ. ಆದರೆ ಇದು ಸರ್ಕಾರದ ಒಟ್ಟು ಬಜೆಟ್‌ನ ಶೇ.0.4ರಷ್ಟು ಮಾತ್ರ’ ಎಂದು ತಿಳಿಸಿದ್ದಾರೆ.

‘₹14 ಲಕ್ಷ ಕೋಟಿ ಮೌಲ್ಯದ ಬ್ಯಾಂಕ್ ಸಾಲ ಮನ್ನಾ ಮಾಡಿ, ₹1.8 ಲಕ್ಷ ಕೋಟಿ ಕಾರ್ಪೊರೇಟ್ ತೆರಿಗೆ ವಿನಾಯಿತಿ ನೀಡಿರುವ ಕೇಂದ್ರ ಸರ್ಕಾರಕ್ಕೆ ರೈತರ ಬೇಡಿಕೆ ಹೊರೆಯೆಂದು ಯಾಕೆ ಅನಿಸುತ್ತಿದೆ’ ಎಂದು ಪ್ರಶ್ನಿಸಿದ್ದಾರೆ.

‘ಎಂಎಸ್‌ಪಿಗೆ ಕಾನೂನಿನ ಖಾತರಿ ನೀಡುವುದರಿಂದ ಕೃಷಿಯಲ್ಲಿ ಹೂಡಿಕೆ ಹೆಚ್ಚಾಗುತ್ತದೆ. ಇದರಿಂದ ಗ್ರಾಮೀಣ ಭಾಗದಲ್ಲಿ ಬೇಡಿಕೆ ಹೆಚ್ಚಾಗುತ್ತದೆ. ಆ ಮೂಲಕ ವಿವಿಧ ಬಗೆಯ ಬೆಳೆಗಳನ್ನು ಬೆಳೆಯುವುದಕ್ಕೆ ರೈತರಿಗೆ ವಿಶ್ವಾಸ ಮೂಡುತ್ತದೆ’ ಎಂದು ಹೇಳಿದರು.

‘ಎಂಎಸ್‌ಪಿ ಬಗ್ಗೆ ಸುಳ್ಳನ್ನು ಹರಡುತ್ತಿರುವವರು ಡಾ. ಸ್ವಾಮಿನಾಥನ್ ಮತ್ತು ಅವರ ಕನಸುಗಳನ್ನು ಅವಮಾನಿಸುತ್ತಿದ್ದಾರೆ’ ಎಂದು ಕಿಡಿಕಾರಿದರು.

ಇದರೊಂದಿಗೆ, ಸ್ವಾಮಿನಾಥನ್ ವರದಿ ಆಧರಿಸಿ ರೈತರ ಬೆಳೆಗಳಿಗೆ ದರವನ್ನು ನಿಗದಿಮಾಡುವ ಪಕ್ಷದ ಸಂಕಲ್ಪ ಕುರಿತು ಬಿಜೆಪಿ ಕಾರ್ಯಕ್ರಮವೊಂದರಲ್ಲಿ ಮೋದಿ ಮಾತನಾಡಿರುವ ವಿಡಿಯೊವನ್ನು ರಾಹುಲ್ ಗಾಂಧಿ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.