ADVERTISEMENT

ಕೇಂದ್ರ ರೈಲು ನಿಲ್ದಾಣಗಳಲ್ಲಿ ಕೃತಕ ಪಾನೀಯಗಳಿಗೆ ನಿಷೇಧ

ಪಿಟಿಐ
Published 28 ಮಾರ್ಚ್ 2019, 11:45 IST
Last Updated 28 ಮಾರ್ಚ್ 2019, 11:45 IST
ಚಿತ್ರ ಕೃಪೆ: ಟ್ವಿಟರ್
ಚಿತ್ರ ಕೃಪೆ: ಟ್ವಿಟರ್   

ಮುಂಬೈ: ಕೇಂದ್ರ ರೈಲು ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ನಿಂಬೆ ಹಣ್ಣಿನ ಜ್ಯೂಸ್‌ ಹಾಗೂ ಇತರ ಸಿರಪ್‌ಗಳಿಂದ ತಯಾರಿಸಿದ ಪಾನೀಯಗಳ ಮಾರಾಟವನ್ನು ನಿಷೇಧಿಸಲಾಗಿದೆ.

ಇಂತಹ ಪಾನೀಯಗಳನ್ನು ರೈಲು ನಿಲ್ದಾಣದಲ್ಲಿ ಅನಾರೋಗ್ಯಕರ ರೀತಿಯಲ್ಲಿ ತಯಾರಿಸುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆದ ಬಳಿಕ ಇವುಗಳಿಗೆ ನಿರ್ಬಂಧ ಹೇರಲಾಗಿದೆ.

ಮುಂಬೈನ ಕುರ್ಲಾ ರೈಲು ನಿಲ್ದಾಣದ ಆಹಾರ ಮಳಿಗೆಯೊಂದರಲ್ಲಿ ವ್ಯಕ್ತಿಯೊಬ್ಬರು ಅನಾರೋಗ್ಯಕರ ರೀತಿಯಲ್ಲಿ ನಿಂಬೆ ಹಣ್ಣಿನ ಜ್ಯೂಸ್‌ ತಯಾರಿಸುತ್ತಿರುವ ವಿಡಿಯೊವನ್ನು ಪ್ರಯಾಣಿಕರೊಬ್ಬರು ಚಿತ್ರೀಕರಿಸಿದ್ದರು.

ADVERTISEMENT

ವ್ಯಕ್ತಿಯು ಪಾನೀಯ ತಯಾರಿಸಲು ಬರಿಗೈಯಲ್ಲಿಯೇ ನಿಂಬೆರಸ ಮಿಶ್ರಣ ಮಾಡುತ್ತಿರುವುದು ವಿಡಿಯೊದಲ್ಲಿ ದಾಖಲಾಗಿತ್ತು.

ಈ ವಿಡಿಯೊವನ್ನು ಚಿತ್ರೀಕರಿಸಿದ್ದ ವ್ಯಕ್ತಿಯು ಬಳಿಕ ಅದನ್ನು ಕೇಂದ್ರ ರೈಲ್ವೆಯ ಟ್ವಿಟ್ಟರ್‌ ಖಾತೆಗೆ ಟ್ಯಾಗ್‌ ಮಾಡಿದ್ದರು.

‘ನಿಂಬೆ ಹಣ್ಣಿನ ಜ್ಯೂಸ್‌ ಹಾಗೂ ಕೃತಕ ಸವಿಯ ಮಿಶ್ರಣದಿಂದ ಪಾನೀಯಗಳನ್ನು ಕೇಂದ್ರೀಯ ರೈಲ್ವೆಯ ವ್ಯಾಪ್ತಿಯ ಆಹಾರ ಮಳಿಗೆಗಳಲ್ಲಿ ಷೇಧಿಸಲಾಗಿದೆ’ ಎಂದು ಕೇಂದ್ರ ರೈಲ್ವೆಯ ಪ್ರಧಾನ ಚೀಫ್ ಕಮರ್ಷಿಯಲ್‌ ಮ್ಯಾನೇಜರ್‌ ಶೈಲೇಂದ್ರ ಕುಮಾರ್‌ ತಿಳಿಸಿದ್ದಾರೆ.

ಪ್ರಯಾಣಿಕರ ಆರೋಗ್ಯದ ದೃಷ್ಟಿಯಿಂದ ಇಂತಹ ಪಾನೀಯಗಳಿಗೆ ನಿಷೇಧ ಹೇರಲಾಗಿದೆ ಎಂದು ಅವರು ಹೇಳಿದ್ದಾರೆ. ತಾಜಾ ಹಣ್ಣಿನ ಜ್ಯೂಸ್‌ಗಳಿಗೆ ನಿಷೇಧ ಇಲ್ಲ ಎಂದೂ ಅವರು ತಿಳಿಸಿದ್ದಾರೆ.

ಅನಾರೋಗ್ಯಕರ ರೀತಿಯಲ್ಲಿ ಪಾನೀಯ ತಯಾರಿಸಿದ ಆಹಾರ ಮಳಿಗೆಯನ್ನು ರೈಲ್ವೆ ಅಧಿಕಾರಿಗಳು ಮುಚ್ಚಿಸಿದ್ದಾರೆ.

ಕೇಂದ್ರ ರೈಲ್ವೆ ವ್ಯಾಪ್ತಿಯು ಮಧ್ಯಪ್ರದೇಶ ಮತ್ತು ಕರ್ನಾಟಕದ ಕೆಲ ಪ್ರದೇಶಳನ್ನೂ ಒಳಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.