ಅಹಮದಾಬಾದ್: ಕುಟುಂಬದವರಿಂದ ತಮಗೆ ಬೆದರಿಕೆ ಇದ್ದು, ಸೂಕ್ತ ರಕ್ಷಣೆ ಕೊಡಿಸುವಂತೆ ಸಲಿಂಗಿಪೊಲೀಸ್ ಜೋಡಿಯು ಗುಜರಾತ್ ಹೈ ಕೋರ್ಟ್ ಮೆಟ್ಟಿಲೇರಿದೆ.
ಇಬ್ಬರಿಗೂ ಸೂಕ್ತ ಭದ್ರತೆ ನೀಡುವಂತೆ ನ್ಯಾಯಾಲಯವು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಿದೆ.
‘ಗುಜರಾತ್‌ನ ಮಹಿಸಾಗರ್ ಜಿಲ್ಲೆಯಲ್ಲಿ ಸುಮಾರು ಮೂರು ವರ್ಷಗಳಿಂದ ನೆಲೆಸಿರುವ ತಾವು ಪರಸ್ಪರ ಪ್ರೀತಿಸುತ್ತಿದ್ದೇವೆ. ಒಂದೇ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದು, ಪೋಲಿಸ್ ವಸತಿ ಗೃಹದಲ್ಲಿ ಜೊತೆಯಾಗಿಯೇ ವಾಸಿಸುತ್ತಿದ್ದೇವೆ. ಸಹ ಜೀವನ ನಡೆಸುವ ಕುರಿತು ಇದೇ ತಿಂಗಳ 10ರಂದು ಒಪ್ಪಂದವನ್ನೂ ಮಾಡಿಕೊಂಡಿದ್ದೇವೆ’ ಎಂದು ಈ ಜೋಡಿಯು ಅರ್ಜಿಯಲ್ಲಿ ತಿಳಿಸಿದೆ.
‘ಸಲಿಂಗಿಗಳು ಎಂಬ ಕಾರಣಕ್ಕೆ ಎರಡೂ ಕುಟುಂಬದವರು ನಮ್ಮ ಪ್ರೀತಿಗೆವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸಂಬಂಧ ಕಡಿದುಕೊಂಡು ಮನೆಗೆ ಮರಳುವಂತೆ ಒತ್ತಾಯಿಸುತ್ತಿದ್ದಾರೆ. ಜೊತೆಗೆ ಬೆದರಿಕೆಯನ್ನೂ ಒಡ್ಡುತ್ತಿದ್ದಾರೆ’ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
‘ಇಬ್ಬರೂ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಕಾರಣ ಇದುವರೆಗೂ ಯಾವುದೇ ತೊಂದರೆಯಾಗಿರಲಿಲ್ಲ. ಈಗ ನ್ಯಾಯಾಲಯವೂ ಸೂಕ್ತ ಭದ್ರತೆ ನೀಡುವಂತೆಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದೆ. ಅವರು ಪೊಲೀಸ್ ರಕ್ಷಣೆ ನೀಡುವ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ ಎಂಬ ವಿಶ್ವಾಸವಿದೆ’ ಎಂದು ಅರ್ಜಿದಾರರ ಪರ ವಕೀಲ ಪಾಂಥಿಲ್ ಮಜುಂದಾರ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.