ನವದೆಹಲಿ: ‘ಗುದ ಸಂಭೋಗ’ ಹಾಗೂ ‘ಸ್ತ್ರೀಯರಲ್ಲಿನ ಸಲಿಂಗ ಕಾಮ’ ಅಸ್ವಾಭಾವಿಕ ಲೈಂಗಿಕ ಅಪರಾಧಗಳು ಎಂದಿರುವ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ), ವೈದ್ಯಕೀಯ ಶಿಕ್ಷಣದ ಪದವಿ ಪಠ್ಯಕ್ರಮದಲ್ಲಿ ಈ ವಿಷಯಗಳನ್ನು ಪುನಃ ಸೇರ್ಪಡೆ ಮಾಡಿದೆ.
ಇದರೊಂದಿಗೆ ‘ಯೋನಿಪೊರೆ ಹಾಗೂ ಇತರ ಭಾಗಗಳು’ ಎಂಬ ಪಠ್ಯವೂ ಮರುಸೇರ್ಪಡೆಗೊಂಡಿದೆ. ಕನ್ಯತ್ವ ಮತ್ತು ಡಿಫ್ಲೋರೇಶನ್, ವೈದ್ಯಕೀಯ ಕಾನೂನು ಪ್ರಾಮುಖ್ಯತೆಯಂತ ವಿಷಯಗಳನ್ನು ಆಯೋಗ ಮರಳಿ ತಂದಿದೆ.
ಮದ್ರಾಸ್ ಹೈಕೋರ್ಟ್‌ನ ನಿರ್ದೇಶನದಂತೆ, ಈ ವಿಷಯಗಳನ್ನು 2022ರಲ್ಲಿ ಪಠ್ಯಕ್ರಮದಿಂದ ಕೈಬಿಡಲಾಗಿತ್ತು.
ಈ ಪರಿಷ್ಕೃತ ಪಠ್ಯವು ವಿಧಿವಿಜ್ಞಾನ ಹಾಗೂ ಟಾಕ್ಸಿಕಾಲಜಿ ವಿಭಾಗದಲ್ಲಿ ‘ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (BNSS), ಭಾರತೀಯ ನ್ಯಾಯ ಸಂಹಿತೆ (BNS), ಭಾರತೀಯ ಸಾಕ್ಷ್ಯ ಅಧಿನಿಯಮ (BSA), ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳು, ಪೊಲೀಸ್ ವಿಚಾರಣೆ ಮತ್ತು ಮ್ಯಾಜಿಸ್ಟ್ರೇಟ್ ವಿಚಾರಣೆ, ಅರಿಯಬಹುದಾದ ಮತ್ತು ಅರಿಯಲಾಗದ ಅಪರಾಧಗಳ ಕುರಿತ ಕಾನೂನು ಜ್ಞಾನ ಎಂಬ ಪಠ್ಯದಲ್ಲಿ ಸೇರಿಸಲಾಗಿದೆ.
ಲೈಂಗಿಕ ವಿಕೃತಿ, ಲೈಂಗಿಕ ಪ್ರಚೋದನೆ, ಕ್ರೌರ್ಯ, ಹೆಣಗಳನ್ನು ತಿನ್ನುವುದು, ಸ್ವಪೀಡನೆ, ಶವಸಂಭೋಗ ಮತ್ತಿತರ ವಿಷಯಗಳ ಕುರಿತು ಪಠ್ಯದಲ್ಲಿ ಸೇರಿಸಲಾಗಿದೆ. ಆದರೆ, ‘ಕ್ವೀರ್’ಗಳ ನಡುವಿನ ಒಪ್ಪಿತ ಲೈಂಗಿಕತೆಯನ್ನು ಪಠ್ಯಕ್ರಮದಿಂದ ತೆಗೆದು ಹಾಕಲಾಗಿದೆ ಎಂದು ಮೂಲಗಳು ಹೇಳಿವೆ.
ವೈದ್ಯಕೀಯ ಕಾನೂನು ಚೌಕಟ್ಟು, ನೀತಿ ಸಂಹಿತೆಗಳು, ವೈದ್ಯ ವೃತ್ತಿಯ ನೀತಿಗಳು, ವೃತ್ತಿಪರ ದುರ್ನಡತೆ ಮತ್ತು ವೈದ್ಯಕೀಯ ನಿರ್ಲಕ್ಷ್ಯ, ವೈದ್ಯಕೀಯ-ಕಾನೂನು ಪರೀಕ್ಷೆ ಮತ್ತು ದಾಖಲಾತಿಗಳ ಕುರಿತು ನೂತನ ಪಠ್ಯಕ್ರಮದ ಮೂಲಕ ವಿದ್ಯಾರ್ಥಿಗಳು ಮಾಹಿತಿ ಪಡೆಯಲಿದ್ದಾರೆ. ವಿವಿಧ ವೈದ್ಯಕೀಯ-ಕಾನೂನು ಪ್ರಕರಣಗಳು ಮತ್ತು ಸಂಬಂಧಿತ ನ್ಯಾಯಾಲಯದ ತೀರ್ಪುಗಳು ಸೇರಿದಂತೆ ವೈದ್ಯಕೀಯ ವೃತ್ತಿಪರರಿಗೆ ಸಂಬಂಧಿಸಿದ ಇತ್ತೀಚಿನ ಕಾಯ್ದೆಗಳು ಮತ್ತು ಅದಕ್ಕೆ ಸಂಬಂಧಿಸಿದ ನ್ಯಾಯಾಲಯದ ತೀರ್ಪುಗಳನ್ನು ಆಧರಿಸಿ ವಿದ್ಯಾರ್ಥಿಗಳು ಕಲಿಯಲಿದ್ದಾರೆ ಎಂದು ಎನ್‌ಎಂಸಿ ಹೇಳಿದೆ.
ಸಾಮರ್ಥ್ಯ ಆಧಾರಿತ ವೈದ್ಯಕೀಯ ಶಿಕ್ಷಣ ಪಠ್ಯಕ್ರಮ (CBME)–2024ರ ಮಾರ್ಗಸೂಚಿ ಕುರಿತು ಪ್ರತಿಕ್ರಿಯಿಸಿರುವ ಎನ್‌ಎಂಸಿ, ‘ಸದ್ಯ ಇರುವ ನಿಯಮಗಳು ಹಾಗೂ ಮಾರ್ಗಸೂಚಿಗಳಲ್ಲಿನ ವಿವಿಧ ಅಂಶಗಳನ್ನು ಮರುಪರಿಶೀಲಿಸುವ ಸಮಯ ಇದಾಗಿದೆ. ಬದಲಾಗುತ್ತಿರುವ ಜನ, ಸಾಮಾಜಿಕ ಹಾಗೂ ಆರ್ಥಿಕ ಪರಿಸ್ಥಿತಿ, ಗ್ರಹಿಕೆ, ಮೌಲ್ಯ, ವೈದ್ಯಕೀಯ ಶಿಕ್ಷಣದಲ್ಲಿನ ಪ್ರಗತಿ ಹಾಗೂ ನಿರೀಕ್ಷೆಗಳಿಗೆ ಅನುಗುಣವಾಗಿ ಪಠ್ಯಕ್ರಮ ಇರಬೇಕು’ ಎಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.