ವಯನಾಡ್: ‘ತ್ರಿಶೂರ್ ಪೂರಂ’ ಉತ್ಸವಕ್ಕೆ ಅಡ್ಡಿಪಡಿಸುವ ಮೂಲಕ ಬಿಜೆಪಿ ತ್ರಿಶೂರ್ ಲೋಕಸಭಾ ಕ್ಷೇತ್ರವನ್ನು ಗೆದ್ದುಕೊಂಡಿತು ಎಂದು ಆರೋಪಿಸುವ ಕಾಂಗ್ರೆಸ್, ಅಮೆರಿಕ ಅಧ್ಯಕ್ಷೀಯ ಚುನಾವಣೆ ಗೆಲ್ಲಲು ಡೊನಾಲ್ಡ್ ಟ್ರಂಪ್ ಯಾವ ಉತ್ಸವಕ್ಕೆ ಅಡ್ಡಿಪಡಿಸಿದ್ದರೆಂದು ಹೇಳಲಿ ಎಂದು ಕೇಂದ್ರ ಸಚಿವ ಸುರೇಶ್ ಗೋಪಿ ಕೇಳಿದರು.
ವಯನಾಡ್ ಲೋಕಸಭಾ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿ ನವ್ಯ ಹರಿದಾಸ್ ಪರ ಪ್ರಚಾರದ ವೇಳೆ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಗೋಪಿ, ‘ಈ ಬಗ್ಗೆ ತನಿಖೆ ನಡೆಸಲು ಕೇರಳ ಪೊಲೀಸರನ್ನು ಅಲ್ಲಿಗೆ(ಅಮೆರಿಕ) ಕಳುಹಿಸಲಿ’ ಎಂದು ಲೇವಡಿ ಮಾಡಿದರು.
‘ಶ್ರೀಘ್ರದ್ಲಲೇ ವಿರೋಧ ಪಕ್ಷಗಳು ಇಂತಹ ಕಥೆಗಳನ್ನು ಕಟ್ಟಲಾರಂಭಿಸುತ್ತವೆ’ ಎಂದು ಕುಟುಕಿದರು.
‘ತ್ರಿಶೂರ್‌ನಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದು ಜನರು ಬಯಸಿದ್ದರು. ಅದಕ್ಕಾಗಿ ಬಿಜೆಪಿಗೆ ಮತ ಹಾಕಿದ್ದಾರೆ. ಅಮೆರಿಕದಲ್ಲೂ ಟ್ರಂಪ್ ಅಧಿಕಾರಕ್ಕೆ ಬರಬೇಕು ಎಂದು ಅಲ್ಲಿನ ಜನ ಬಯಸಿ ಅವರ ಪಕ್ಷಕ್ಕೆ ಮತ ಹಾಕಿದ್ದಾರೆ. ಇವರು(ಕಾಂಗ್ರೆಸ್) ಆರೋಪಿಸುವ ಹಾಗೆ ಯಾವುದೇ ಉತ್ಸವಕ್ಕೆ ಅಡ್ಡಿಪಡಿಸಿ ಮತ ಪಡೆದಿದ್ದಲ್ಲ’ ಎಂದರು.
ಇದೇ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ವಯನಾಡ್ ಜನರ ಬೆಂಬಲದೊಂದಿಗೆ ಒಬ್ಬ ಮಹಾನ್ ವ್ಯಕ್ತಿ(ರಾಹುಲ್ ಗಾಂಧಿ) ಸಂಸತ್ತಿಗೆ ಕಾಲಿಟ್ಟರು. ಸಂವಿಧಾನ ರಕ್ಷಿಸುವ ಹೆಸರಿನಲ್ಲಿ ಗದ್ದಲವನ್ನೇ ಸೃಷ್ಟಿಸಿದರು’ ಎಂದು ಕಿಡಿಕಾರಿದರು.
‘ನೀವು ಅವರ ಸಂವಿಧಾನ ಪುಸ್ತಕವನ್ನು ತೆರೆದರೆ ಅದರಲ್ಲಿ ಏನು ಇಲ್ಲ. ಅದು ಖಾಲಿ ಖಾಲಿಯಾಗಿದೆ. ನೈಜ ಸಂವಿಧಾನವನ್ನು ರಕ್ಷಿಸುವ ಸಲುವಾಗಿಯೇ ನಾವು ವಕ್ಫ್ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸಿದ್ದೇವೆ’ ಎಂದು ಹೇಳಿದರು.
ವಯನಾಡ್ ಲೋಕಸಭಾಕ್ಷೇತ್ರದ ಉಪಚುನಾವಣೆಗೆ ನವೆಂಬರ್ 13ರಂದು ಮತದಾನ ನಡೆಯಲಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.