ಪುರಿ (ಒಡಿಶಾ): ಪುರಿ ಜಗನ್ನಾಥ ದೇವಸ್ಥಾನದ ಗರ್ಭಗುಡಿಯ ಪಕ್ಕದಲ್ಲಿರುವ ರತ್ನ ಭಂಡಾರದ ನಾಪತ್ತೆಯಾದ ಕೀಲಿಕೈ ಎಲ್ಲಿ ಹೋಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪತ್ತೆಮಾಡಲಿ ಎಂದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಆಪ್ತ ವಿ. ಕೆ ಪಾಂಡಿಯನ್ ಹೇಳಿದ್ದಾರೆ.
ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪಾಂಡಿಯನ್, 'ರಾಜ್ಯದಲ್ಲಿ ದೀರ್ಘಕಾಲದಿಂದ ಭಾವನಾತ್ಮಕವಾಗಿದ್ದ ಈ ವಿಷಯವನ್ನು ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಲೋಕಸಭೆ ಮತ್ತು ವಿಧಾನಸಭೆ ಚುನಾವಣಾ ರ್‍ಯಾಲಿಗಳಲ್ಲಿ ಪ್ರಸ್ತಾಪಿಸಿ ರಾಜಕೀಯ ಕೇಂದ್ರಬಿಂದುವಾಗಿ ಮಾಡಿದ್ದಾರೆ' ಎಂದರು.
ಇತ್ತೀಚೆಗಷ್ಟೇ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ್ದ ಮೋದಿ ಕೀಲಿಕೈ ಬಗ್ಗೆ ಪ್ರಸ್ತಾಪಿಸಿದ್ದರು. ಕೀಲಿಕೈ ತಮಿಳುನಾಡಿಗೆ ಹೋಗಿದೆ ಎಂದೂ ಹೇಳಿದ್ದರು. ಈ ಬಗ್ಗೆ ಪ್ರಧಾನಿಯವರಿಗೆ ಮಾಹಿತಿ ಇದ್ದರೆ ಕೀಲಿಕೈ ಎಲ್ಲಿಗೆ ಹೋಗಿದೆ ಎಂದು ಪತ್ತೆ ಮಾಡಲಿ. ಅವರ ಬಳಿ ಅಧಿಕಾರವಿದೆ. ಕೀಲಿ ಕೈ ಪತ್ತೆ ಮಾಡುವಂತೆ ನಾನು ಅವರಲ್ಲಿ ವಿನಂತಿಸುತ್ತೇನೆ ಎಂದರು.
ಸೋಮವಾರ ಅಂಗುಲ್ ಮತ್ತು ಕಟಕ್‌ನಲ್ಲಿ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, 'ಪುರಿಯಲ್ಲಿರುವ ಜಗನ್ನಾಥ ದೇವಾಲಯ ಸುರಕ್ಷಿತವಾಗಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದರು. ಅಲ್ಲದೇ ದೇವಾಲಯದ ಗರ್ಭಗುಡಿಯ ಪಕ್ಕದಲ್ಲಿರುವ 'ರತ್ನ ಭಂಡಾರ'ದ ಕೀಲಿಕೈ ಕಳೆದ 6 ವರ್ಷಗಳಿಂದ ಕಾಣೆಯಾಗಿದೆ' ಎಂದು ಆರೋಪಿಸಿದ್ದರು.
'ನವೀನ್ ಪಟ್ನಾಯಕ್ ಅವರು ಪುರಿ ಜಗನ್ನಾಥ ದೇಗುಲದ ರತ್ನ ಭಂಡಾರದ ನಾಪತ್ತೆಯಾದ ಕೀಲಿಕೈ ಬಗ್ಗೆ ಸ್ಪಷ್ಟನೆ ನೀಡಬೇಕು' ಎಂದು ಮಂಗಳವಾರ ನಯಾಗಢದಲ್ಲಿ ನಡೆದ ರ್‍ಯಾಲಿಯಲ್ಲಿ ಶಾ ಹೇಳಿದ್ದರು.
ಇದಕ್ಕೆ ತಿರುಗೇಟು ನೀಡಿದ ಪಾಂಡಿಯನ್ , ಸುಮಾರು ನಾಲ್ಕು ದಶಕಗಳಿಂದ ರತ್ನ ಭಂಡಾರದ ಒಳ ಕೋಣೆಯನ್ನು ತೆರೆಯಲಾಗಿಲ್ಲ. ಒಂದು ದಶಕ ಬಿಜೆಪಿ ಮಂತ್ರಿಗಳೂ ಈ ಸಮಸ್ಯೆಯನ್ನು ನಿಭಾಯಿಸಿದರು. ಆದ್ದರಿಂದ ಬಹುಶಃ ಅವರು ಕೀಲಿಕೈ ಎಲ್ಲಿದೆ ಎಂದು ಕಂಡುಹಿಡಿಯಬೇಕು ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.